

ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಾಲಿವುಡ್ ಚೆಲುವೆ ನಟಿ ಕಂಗನಾ ರಣಾವತ್, ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯರನ್ನು ಸೋಲಿಸಿ, ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ದಾಖಲಿಸಿದರು. ಸದಾ ಒಂದಲ್ಲ ಒಂದು ವಿಚಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುವ ನಟಿ ಕಂಗನಾ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಜೂ.9ಕ್ಕೆ ಡೈರೆಕ್ಟರ್ ಆ್ಯಕ್ಷನ್ ನಾಟಕ ಪ್ರದರ್ಶನ
ರೈತರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಸಿಐಎಸ್ಎಫ್(CISF) ಮಹಿಳಾ ಪೇದೆ ನೂತನ ಸಂಸದೆಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳ ಮೋಕ್ಷ ಮಾಡಿದ್ದರು. ಈ ಘಟನೆ ನಡೆಯುತ್ತಿದ್ದಂತೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಒಂದೆಡೆ ಇಂತಹ ಘಟನೆ ನಡೆಯಬಾರದಿತ್ತು, ನಡೆದುಹೋಗಿದೆ. ಬೇಸರಗೊಳ್ಳಬೇಡಿ ಕಂಗನಾ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಬೆಂಬಲ ನೀಡಿದರೆ, ಇನ್ನೂ ಕೆಲವರು ಕಂಗನಾರನ್ನು ಲೇವಡಿ ಮಾಡಿದ್ದಾರೆ.
ಇದೇ ವಿಷಯವನ್ನು ಮುಂದಿಟ್ಟು ಮಾತನಾಡಿದ ನೂತನ ಸಂಸದೆ, "ನನಗೆ ಮಾಧ್ಯಮ ಮಿತ್ರರು ಹಾಗೂ ಹಿತೈಷಿಗಳಿಂದ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿವೆ. ಮೊದಲನೆಯದಾಗಿ, ನಾನು ಸುರಕ್ಷಿತವಾಗಿದ್ದೇನೆ, ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿತು. ಸೆಕ್ಯುರಿಟಿ ಚೆಕ್ ಮುಗಿಸಿ ಹೊರಬಂದ ತಕ್ಷಣ, ಎರಡನೇ ಕ್ಯಾಬಿನ್‌ನಲ್ಲಿದ್ದ ಸಿಐಎಸ್‌ಎಫ್‌ನ ಭದ್ರತಾ ಸಿಬ್ಬಂದಿಯೊಬ್ಬರು ನನ್ನ ಕಪಾಳಕ್ಕೆ ಹೊಡೆದು, ನಿಂದಿಸಿದರು" ಎಂದರು.
ಇನ್ನು ಬಾಲಿವುಡ್ ಚಿತ್ರರಂಗದವರು ತನ್ನ ಬೆಂಬಲಕ್ಕೆ ನಿಲ್ಲದೆ, ಕಿಂಚಿತ್ತು ಸ್ಪಂದಿಸದೆ ಹೋಗಿದ್ದಕ್ಕೆ ಸಿಡಿಮಿಡಿಗೊಂಡು, ಕಳವಳ ವ್ಯಕ್ತಪಡಿಸಿದ ಕಂಗನಾ, "ವಿಮಾನ ನಿಲ್ದಾಣದಲ್ಲಿ ನನ್ನ ಮೇಲಾದ ದಾಳಿಯನ್ನು ಆತ್ಮೀಯ ಚಿತ್ರರಂಗದವರೆಲ್ಲರೂ ಸಂಭ್ರಮಿಸುತ್ತಿದ್ದೀರಿ. ಮುಂದೊಂದು ದಿನ ನಿಮಗೆ ನಾನೇನು ಎಂಬುದು ತಿಳಿಯುತ್ತದೆ" ಎಂದು ಅತೀವ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).