

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಇದೀಗ ದಿಢೀರ್ ಹಿಂದೆ ಸರಿದಿದ್ದಾರೆ. ಇದನ್ನು ಸ್ವತಃ ಅವರೇ ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ದೇಶದ ಹಾಲಿ ಅಧ್ಯಕ್ಷರೂ ಆಗಿರುವ ಬೈಡೆನ್ ಇದೇ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿದ್ದರು. ಅವರಿಗೆ 81 ವರ್ಷ ವಯಸ್ಸಾಗಿದ್ದು, ಚುನಾವಣೆ ಸಂಬಂಧದ ಬಹಿರಂಗ ಸಭೆಗಳಲ್ಲಿಯೇ ಅವರ ಮರೆಗುಳಿತನದ ಘಟನೆಗಳು ಸಂಭವಿಸಿ ಜಗತ್ತಿನಾದ್ಯಂತ ಚರ್ಚೆಗೀಡಾಗಿದ್ದವು.
ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಮಳೆ ಮುಂದುವರಿದ ನೆರೆಹಾವಳಿ
ಇದರಿಂದಾಗಿ ಸ್ವಪಕ್ಷೀಯರೇ ಅವರ ಉಮೇದುವಾರಿಕೆಯನ್ನು ವಿರೋಧಿಸತೊಡಗಿದ್ದರು. ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ರನ್ನು ಎದುರಿಸುವ ಸಾಮರ್ಥ್ಯ ಬೈಡೆನ್ ಅವರಿಗಿಲ್ಲ ಎಂದು ನೇರವಾಗಿ ಟೀಕಿಸಿದ್ದರು. ಕಳೆದ ವಾರವಷ್ಟೇ ಬೈಡೆನ್‌ಗೆ ಕೋವಿಡ್ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
* ಭಾರತೀಯ ಮೂಲದ ಮಹಿಳೆಗೆ ಡೆಮಾಕ್ರಟಿಕ್ ಪಕ್ಷದ ಮಣೆ
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಹಿಂದೆ ಸರಿಯುತ್ತಿದ್ದಂತೆಯೇ ಅವರ ಸ್ಥಾನದಲ್ಲಿ ಉಮೇದುವಾರಿಕೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸ್ಪರ್ಧಿಸುವುದು ಖಚಿತವಾಗಿದೆ. ಈಗ ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿರುವ ಬೈಡೆನ್ ಅದರ ಜತೆಗೇ ಕಮಲಾ ಹ್ಯಾರಿಸ್ ಅವರನ್ನು ಅಭ್ಯರ್ಥಿ ಮಾಡುವಂತೆ ಪಕ್ಷಕ್ಕೆ ಶಿಫಾರಸು ಮಾಡಿದ್ದಾರೆ.
‘ನವೆಂಬರ್ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಉಳಿದ ಅಧ್ಯಕ್ಷಾವಧಿಯನ್ನು ನನ್ನ ಪಾಲಿನ ಕರ್ತವ್ಯ ಮುಗಿಸಲು ಬಳಸುತ್ತೇನೆ. 2020ರಲ್ಲಿ ನಾನು ಅಭ್ಯರ್ಥಿ ಆಗುತ್ತಿದ್ದಂತೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ನಾನೇ ಸೂಚಿಸಿದ್ದೆ. ಅದು ನನ್ನ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ಅಧ್ಯಕ್ಷೀಯ ಪದವಿಯ ಉಮೇದುವಾರಿಕೆಗೆ ಸೂಚಿಸುತ್ತಿದ್ದೇನೆ. ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಪ್ರತಿಸ್ಪರ್ಧಿ ಟ್ರಂಪ್ ಅವರನ್ನು ನಾವೆಲ್ಲ ಒಗ್ಗಟ್ಟಿನಿಂದ ಸೋಲಿಸೋಣ. ಅಮೆರಿಕದ ಹಿತ ಕಾಯುವ ಸಲುವಾಗಿ ನಾವು ಈ ಕೆಲಸವನ್ನು ಮಾಡಬೇಕಾಗಿದೆ’ ಎಂದು ಬೈಡೆನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.