

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಪ್ರಮುಖ ಮಿತ್ರ ಪಕ್ಷಗಳಲ್ಲಿ ಒಂದಾಗಿರುವ ಮತ್ತು ಖ್ಯಾತ ನಟ ಮತ್ತು ರಾಜ್ಯಸಭೆ ಸಂಸದ ಕಮಲ್ ಹಾಸನ್(Kamal Haasan) ನೇತೃತ್ವದ ಮಕ್ಕಳ್ ನೀಧಿ ಮಯ್ಯಮ್ ಪಕ್ಷವು, 2026 ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಹೊಸ ಚಿಹ್ನೆ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಎಂಎನ್‌ಎಂ ಪಕ್ಷ, ನಟ ಕಮಲ್ ಹಾಸನ್ ನೇತೃತ್ವದ ಪಕ್ಷದ ಮುಖಂಡರ ನಿಯೋಗವು ನವದೆಹಲಿಯಲ್ಲಿರುವ ಭಾರತೀಯ ಚುನಾವಣಾ ಆಯೋಗದ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳಿಗೆ 10 ಚಿಹ್ನೆಗಳ ಆದ್ಯತೆಯ ಪಟ್ಟಿಯಿಂದ ಸಾಮಾನ್ಯ ಚಿಹ್ನೆಯನ್ನು ಹಂಚಿಕೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಎಂಎನ್‌ಎಂ ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಮಿತ್ರ ಪಕ್ಷವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಡಿಎಂಕೆ ಬೆಂಬಲದಿಂದ ಕಮಲ್ ಹಾಸನ್ ರಾಜ್ಯಸಭಾ ಸದಸ್ಯರಾಗಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ, ಚುನಾವಣಾ ಆಯೋಗವು ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ಚಿಹ್ನೆಯನ್ನು ನೀಡಿತ್ತು. (ಏಜೆನ್ಸೀಸ್)