

ಪಾಟ್ನಾ: ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಬಿಹಾರ ಚುನಾವಣೆ(Bihar Election) ಮುಗಿದಿದ್ದು, ಮತ ಎಣಿಕೆ ಅಷ್ಟೇ ಬಾಕಿಯಿದೆ. ಆದರೆ ನಿನ್ನೆ ಸಂಜೆ ಬಿಡುಗಡೆಗೊಂಡ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಎನ್ಡಿಎ ಗೆಲ್ಲುವ ಸೂಚನೆ ನೀಡಿವೆ. ಆದರೆ ಇಂಡಿಯಾ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್, ಎಕ್ಸಿಟ್ ಪೋಲ್ ಫಲಿತಾಂಶವನ್ನು ತಿರಸ್ಕರಿಸಿದ್ದು, ಇಂಡಿಯಾ ಕೂಟ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಇಂದು(ನ. 12) ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಅಮಿತ್ ಶಾ ಬರೆದದ್ದನ್ನು ಪ್ರಧಾನಿ ಕಚೇರಿ ಮಾಧ್ಯಮಗಳಿಗೆ ಕಳುಹಿಸುತ್ತದೆ. ಸುದ್ದಿ ಮಾಧ್ಯಮಗಳು ಅದನ್ನು ಪ್ರಸಾರ ಮಾಡಿವೆ. 2020ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 72 ಲಕ್ಷ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ಈ ಹೆಚ್ಚಿನ ಮತದಾನವು ನಿತೀಶ್ ಕುಮಾರ್ ಅವರ ಆಡಳಿತ ವಿರೋಧಿ ಅಲೆಯನ್ನು ಸೂಚಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ನಿತೀಶ್ ಕುಮಾರ್ ಸರ್ಕಾರವನ್ನು ಉಳಿಸಲು ಅಲ್ಲ, ಬದಲಾಯಿಸಲು ಹೆಚ್ಚಿನ ಮತದಾನವಾಗಿದೆ. ಬಿಹಾರದಲ್ಲಿ ಸರ್ಕಾರ ಬದಲಾಗಲಿದೆ. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಕ್ಲೀನ್ಸ್ವೀಪ್ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಡಳಿತರೂಢ ಎನ್ಡಿಎ ಮತ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸಲು ಯತ್ನಿಸುತ್ತಾರೆ. ಅವರು ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಭಯವನ್ನು ಸೃಷ್ಟಿಸುತ್ತಾರೆ. ಬಾಂಬ್ ಸ್ಫೋಟ ನಡೆದಲ್ಲಿ ಅವರು ಏನನ್ನೂ ಮಾಡುವುದಿಲ್ಲ. ಆದರೆ ಜನರಲ್ಲಿ ಭಯ ಮೂಡಿಸಲು ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಬಿಹಾರದ ಎಲ್ಲಾ ಜಿಲ್ಲೆಗಳಲ್ಲಿ ಮಿಲಿಟರಿ ಪರೇಡ್ ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ.
ಈ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಲಿದೆ. ನಮ್ಮ ಜನರು ಭಯಭೀತರಾಗುವುದಿಲ್ಲ. ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಮತ್ತು ಮಾಡಬೇಕಾದ ತ್ಯಾಗಗಳನ್ನು ಮಾಡುತ್ತಾರೆ. ಆದರೆ ಈ ಬಾರಿ ಯಾವುದೇ ಅಕ್ರಮವನ್ನು ನಡೆಯಲು ಬಿಡುವುದಿಲ್ಲ. 2020ರ ಚುನಾವಣೆಯಲ್ಲಿ ಕೇವಲ 12 ಸಾವಿರ ಮತಗಳ ಅಂತರವಿತ್ತು. ಆಗಲೂ ಜನರು ಬದಲಾವಣೆಗಾಗಿ ಮತಹಾಕಿದ್ದರು. ಆದರೆ ಆ ಸಮಯದಲ್ಲಿ ಅಕ್ರಮ ನಡೆದಿತ್ತು ಎಂದು ಆರೋಪಿಸಿದ್ದಾರೆ.
ಬಿಹಾರ ಚುನಾವಣೆಗೆ ಒಟ್ಟು ಎರಡು ಹಂತಗಳಲ್ಲಿ ಮತದಾನವಾಗಿದ್ದು, ನ. 06ರಂದು 121 ಕ್ಷೇತ್ರಗಳಲ್ಲಿ ಮೊದಲನೇ ಹಂತ ಮತದಾನ ನಡೆದು ಶೇ. 65.09 ದಾಖಲೆಯ ಮತದಾನವಾಗಿತ್ತು. ಅದೇ ನಿನ್ನೆ(ನ. 11) ಎರಡನೇ ಹಂತದ ಮತದಾನ ನಡೆದಿದ್ದು ಆಗಲೂ ಶೇ. 69ರಷ್ಟು ದಾಖಲೆ ಮತದಾನ ಆಗಿದೆ. ನ. 14ರಂದು ಮತ ಎಣಿಕೆ ನಡೆಯಲಿದೆ. (ಏಜೆನ್ಸೀಸ್)