ದೆಹಲಿ ಸ್ಫೋಟ; ಭೂತಾನ್​ನಿಂದ ಬಂದ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ | Narendra Modi

PM meets Red Fort blast survivors
Published on

ದೆಹಲಿ: ಭೂತಾನ್‌ ಪ್ರವಾಸದಿಂದ ಮರಳಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ (Narendra Modi), ದೆಹಲಿಯ ಲೋಕ ನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ, ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಗಾಯಗೊಂಡವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದರು.

ಎರಡು ದಿನಗಳ ಭೂತಾನ್ ಪ್ರವಾಸದಲ್ಲಿದ್ದ ಪ್ರಧಾನಿ, ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ, ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ತೆರಳಿದರು. ಗಾಯಾಳುಗಳನ್ನು ಪ್ರತ್ಯೇಕವಾಗಿ ಭೇಟಿಯಾದ ಪ್ರಧಾನಿ ಮೋದಿ, ಅವರೆಲ್ಲರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ಆಸ್ಪತ್ರೆಯ ಭೇಟಿಯ ಕುರಿತಾಗಿ ತಮ್ಮ ಎಕ್ಸ್​ ಖಾತೆಯ ಮೂಲಕ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ ಮೋದಿ, ದೆಹಲಿಯಲ್ಲಿ ನಡೆದ ಸ್ಫೋಟದ ಸಂದರ್ಭದಲ್ಲಿ ಗಾಯಗೊಂಡವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಹೋಗಿ ಭೇಟಿಯಾದೆ. ಎಲ್ಲರೂ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಪಿತೂರಿಯ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಲಾಗುವುದು! ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಕಾರು ಸ್ಫೋಟದ ಹಿಂದಿನ ದುಷ್ಕರ್ಮಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ, ತನಿಖಾ ಸಂಸ್ಥೆಗಳು ಪ್ರಕರಣದ ಕುರಿತಾಗಿ ಸಮಗ್ರ ತನಿಖೆ ನಡೆಸಲಿದ್ದು, ಘಟನೆಗೆ ಕಾರಣರಾದವರನ್ನು ನ್ಯಾಯದ ಕಟಕಟೆಗೆ ತರುತ್ತೇವೆ ಎಂದು ಹೇಳಿದರು. ಬುಧವಾರ ( ನ 11) ಸಂಜೆ 5:30 ಕ್ಕೆ ಪ್ರಧಾನಿ ನೇತೃತದಲ್ಲಿ ಸಂಪುಟ ಸಮಿತಿಯ (ಸಿಸಿಎಸ್) ಸಭೆಯ ನಡೆಯಲಿದ್ದು, ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕೆಂಪು ಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದ ಬಳಿಕ ದೆಹಲಿ ಹೈ ಅಲರ್ಟ್‌ನಲ್ಲಿದ್ದು, ರಾಷ್ಟ್ರ ರಾಜಧಾನಿಯಾದ್ಯಂತ ತಪಾಸಣೆ ನಡೆಸಲಾಗುತ್ತಿದೆ. ದೆಹಲಿಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಅರೆಸೈನಿಕ ಪಡೆಗಳ ಜೊತೆಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆಯ ಕಾರಣದಿಂದ ನಗರವನ್ನು ಪ್ರವೇಶಿಸುವ ಮತ್ತು ಇಲ್ಲಿಂದ ಹೊರಡುವ ಪ್ರತಿ ವಾಹನಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ದೆಹಲಿ ಘಟನೆ...

ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ಹತ್ತಿರವೇ ಇದ್ದ ಅನೇಕ ವಾಹನಗಳು ಸುಟ್ಟುಹೋಗಿದ್ದು, ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರಿನಲ್ಲಿ ಸಂಭವಿಸಿದ ಈ ಘಟನೆ ದೆಹಲಿ ಪೊಲೀಸರು, ಎನ್‌ಐಎ, ಎನ್‌ಎಸ್‌ಜಿ ಮತ್ತು ವಿಧಿವಿಜ್ಞಾನ ತಂಡಗಳಿಂದ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿದೆ. ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಭದ್ರತಾ ತಪಾಸಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು (ಮಂಗಳವಾರ 11) ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಈ ವೇಳೆ ಮಾತನಾಡಿದ ಷಾ, ಎಲ್ಲಾ ಕೋನದಿಂದಲೂ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದರು. ಪ್ರಾರಂಭಿಕ ತನಿಖೆಯ ಪ್ರಕಾರ ಈ ವಾಹನವನ್ನು ಪುಲ್ವಾಮಾ ನಿವಾಸಿಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಇದು ಭಯೋತ್ಪಾದಕ ಸಂಪರ್ಕದ ಕುರಿತಾದ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.

ಸ್ಫೋಟವಾಗುವ ಕೆಲವೇ ಕ್ಷಣಗಳ ಮೊದಲು ಕೆಂಪು ಕೋಟೆಯ ಬಳಿ, ಶಂಕಿತನ ಕಾರು ಇರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಪೊಲೀಸರು 100 ಕ್ಕೂ ಹೆಚ್ಚು ವೀಡಿಯೊ ತುಣುಕುಗಳನ್ನು ಪರಿಶೀಲಿಸುತ್ತಿದ್ದಾರೆ. ಸಂಭವಿಸಿರುವ ಘಟನೆಯು ಯೋಜಿತ ಭಯೋತ್ಪಾದಕ ದಾಳಿಯೇ, ಇಲ್ಲವೇ ಆತ್ಮಹುತಿ ಬಾಂಬ್ ದಾಳಿಯೇ ಎಂದು ತನಿಖೆ ನಡೆಸುತ್ತಿದ್ದು, ನಾಲ್ವರನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net