ದೆಹಲಿ ಕಾರು ಸ್ಫೋಟ; ಭದ್ರತಾ ಲೋಪದ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಅಮಿತ್ ಶಾಗೆ ಕಾಂಗ್ರೆಸ್​ ಒತ್ತಾಯ| Congress

ವಿಜಯವಾಣಿ - 2025-11-12T204738.600
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಬಳಿ 12 ಮಂದಿಯನ್ನು ಬಲಿ ಪಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಭದ್ರತಾ ಲೋಪ ನಡೆದಿದ್ದು, ಅದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ರಾಜೀನಾಮೆ ನೀಡುವಂತೆ ಇಂದು(ನ. 12) ಕಾಂಗ್ರೆಸ್(Congress) ಒತ್ತಾಯಿಸಿದೆ.

ಈ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ. ಗುಪ್ತಚರ ಇಲಾಖೆ ಸೇರಿದಂತೆ ಭದ್ರತೆಯನ್ನು ಖಾತ್ರಿಪಡಿಸುವ ಉನ್ನತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಆಗ ಇತರರು ಹಾಗೆ ಮಾಡಲು ಭಯಪಡುತ್ತಾರೆ.  ಪ್ರಕರಣವನ್ನು ರಾಷ್ಟ್ರೀಯ ಗುಪ್ತಚರ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ತನಿಖಾ ವರದಿ ಹೊರಬರಲಿ. ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಪಕ್ಷವು ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತಲಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಷ್ಟ್ರ ರಾಜಧಾನಿಯಲ್ಲೇ ಗಂಭೀರ ಭಧ್ರತಾ ಲೋಪವಾಗಿದೆ. ಅಮಿತ್ ಶಾ ಅವರಿಗೆ ಜವಾಬ್ದಾರಿಯ ಅರಿವಿದ್ದರೆ ಅವರು ರಾಜೀನಾಮೆ ನೀಡಬೇಕು. ಯುಪಿಎ ಅಧಿಕಾರದಲ್ಲಿದ್ದಾಗ ಮುಂಬೈ ಸ್ಫೋಟ ಸಂಭವಿಸಿದಾಗ, ಅಂದಿನ ಗೃಹ ಸಚಿವರು ಭದ್ರತೆಯ ನೈತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ನೀಡಿದ್ದರು ಎಂದು ಹೇಳಿದ್ದಾರೆ.

ಗೃಹ ಸಚಿವರು ಸಂಸತ್ತಿನಲ್ಲಿ ಯಾವಾಗಲೂ ಸುಳ್ಳು ಹೇಳುತ್ತಿರುತ್ತಾರೆ. ದೇಶದಲ್ಲಿ ಯಾವುದೇ ಗಲಭೆಗಳಿಲ್ಲ, ಯಾವುದೇ ಸ್ಫೋಟಗಳಿಲ್ಲ ಎಂದು ಹೇಳುತ್ತಿರುತ್ತಾರೆ. ಈಗ ಅವರ ಕಣ್ಣ ಮುಂದೆ, ಅವರ ಕಚೇರಿಗೆ ಬಹಳ ಹತ್ತಿರದಲ್ಲೇ ಸ್ಫೋಟ ಸಂಭವಿಸಿದೆ. ಸರ್ಕಾರ ಸ್ಪಷ್ಟವಾದ ತನಿಖೆ ನಡೆಸಿ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net