Bihar Exit Poll | ಮತ್ತೊಮ್ಮೆ ಎನ್​ಡಿಎ ತೆಕ್ಕೆಗೆ ಜಾರಿದರಾ ಯಾದವೇತರ ಮತದಾರರು..?; ಜಾತಿವಾರು ವಿಂಗಡಣೆ ಹೀಗಿದೆ..

Nitish Kumar And Narendra Modi (1)
Published on

ಪಾಟ್ನಾ: ಕಳೆದ ಒಂದು ತಿಂಗಳಿಂದ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಇನ್ನೊಂದು ದಿನ ಬಾಕಿ ಉಳಿದಿದ್ದು, (Bihar Exit Poll) ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮತ್ತು ತೇಜಸ್ವಿ ಯಾದವ್​ ನೇತೃತ್ವದ ಮಹಾಮೈತ್ರಿಕೂಟದ ನಡುವೆ ತೀವ್ರ ಸ್ಪರ್ಧೆ ನಡೆದಿರುವ ಸಾಧ್ಯತೆ ಇದೆ.

ನಿನ್ನೆ ಎರಡನೇ ಹಂತದ ಮತದಾನದ ಬಳಿಕ ಸಂಜೆ ವೇಳೆ ಮತದಾನೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಎಲ್ಲ ಸಂಸ್ಥೆಗಳು ಎನ್​ಡಿಎ ಮೈತ್ರಿಕೂಟಕ್ಕೆ ಮಣೆ ಹಾಕಿವೆ, ಆದರೂ ಮಹಾಘಟಬಂದನ್​ ತೀವ್ರ ಹೋರಾಟವೊಡ್ಡಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಬಿಹಾರದಲ್ಲಿ ಅನೇಕ ವರ್ಷಗಳಿಂದ ಎರಡು ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳು ತಮ್ಮದೇ ಆದ ವೋಟ್​ಬ್ಯಾಂಕ್​ ಹೊಂದಿದ್ದು, ಅಲ್ಲಿಂದ, ಇಲ್ಲಿಯವರೆಗೆ ಅದಕ್ಕೆ ಸ್ವಲ್ಪವು ಕೊಂಕು ತಾಗದಂತೆ ನೋಡಿಕೊಂಡು ಬಂದಿವೆ. ರಾಜ್ಯದಲ್ಲಿ ಎನ್​ಡಿಎದ ಸಾಂಪ್ರದಾಯಿಕ ಮತಬ್ಯಾಂಕ್ ಎಂದರೆ ಅದು​​ ಹಿಂದುಳಿದ ವರ್ಗಗಳು (ಒಬಿಸಿ), ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ), ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಮೇಲ್ಜಾತಿಯ ಮತದಾರರು.

ಅದೇ ಹಳೆಯ ಲೆಕ್ಕಾಚಾರ ಈ ಸಲವೂ ಕೈ ಹಿಡಿದಿದೆ ಎಂದು ಆಕ್ಸಿಸ್ ಮೈ ಇಂಡಿಯಾ ನಿರ್ಗಮನ ಸಮೀಕ್ಷೆ ಭವಿಷ್ಯ ನುಡಿದಿದ್ದು. ಇತ್ತ ಮಹಾಘಟಬಂಧನ್ ತನ್ನ ಮುಸ್ಲಿಂ-ಯಾದವ ಮತಬ್ಯಾಂಕ್ ಮೇಲೆ ಮತ್ತೊಮ್ಮೆ ಹಿಡಿತ ಸಾಧಿಸಿದೆ. ಎನ್‌ಡಿಎಯ ಶೇ 43% ಮತ ಪಡೆದರೆ, ಮಹಾಮೈತ್ರಿಕೂಟ ಶೇ 41% ಪ್ರತಿಶತ , ಪ್ರಶಾಂತ್ ಕಿಶೋರ್​​ರ ಜನ್ ಸುರಾಜ್ ಪಕ್ಷ ಶೇ 4% ಮತ, ಇತರೆ ಸಣ್ಣ ಪುಟ್ಟ ಪಕ್ಷಗಳು ಮತ್ತು ಪಕ್ಷೇತರರು ಶೇ 12% ರಷ್ಟು ಮತಪಡೆಯಬಹುದು ಎನ್ನಲಾಗಿದೆ.

ಜಾತಿವಾರು ವಿಂಗಡಣೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ ಒಬಿಸಿಗಳಲ್ಲಿ ಶೇ 63%, ಇಬಿಸಿಗಳಲ್ಲಿ ಶೇ 58% ಮತ್ತು ಪರಿಶಿಷ್ಟ ಜಾತಿಗಳಲ್ಲಿ ಶೇ 49% ರಷ್ಟು, ಮೇಲ್ಜಾತಿ ಮತದಾರರು ಶೇ 65% ರಷ್ಟು ಮತ ಪಡೆದಿರುವ ಸಾಧ್ಯತೆ ಇದೆ. ಇತ್ತ ಮಹಾಘಟಬಂಧನ್ ತನ್ನ ಮುಸ್ಲಿಂ-ಯಾದವ್ ಸಮೀಕರಣದ ಮೇಲೆ ಹೆಚ್ಚು ಅವಲಂಬಿತವಾಗಿತ್ತು ಎನ್ನಲಾಗಿದ್ದು, ಯಾದವ್ ಮತಗಳಲ್ಲಿ ಶೇ 90% ಮತ್ತು ಮುಸ್ಲಿಂ ಮತಗಳಲ್ಲಿ ಶೇ 79%, ಒಬಿಸಿಗಳು ಶೇ 19%, ಇಬಿಸಿಗಳು ಶೇ 26% ಮತ್ತು ಮೇಲ್ಜಾತಿ ಮತದಾರರು ಶೇ 14% ಮತ ಬಾಚಿಕೊಂಡಿರುವ ನಿರೀಕ್ಷೆ ಇದೆ.

ಮಹಿಳಾ ಮತದಾರರೇ ನಿರ್ಣಾಯಕ...

ಬಿಹಾರದ ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಚುನಾವಣಾ ಆಯೋಗದ ಪ್ರಕಾರ, ಪುರುಷರು ಶೇ. 64, ಮಹಿಳೆಯರು ಶೇ. 71.6 ರಷ್ಟು ಮತ ಚಲಾಯಿಸಿದ್ದಾರೆ, ಮೊದಲ ಹಂತಕ್ಕಿಂತ, ಎರಡನೇ ಹಂತದಲ್ಲಿ ಹೆಚ್ಚಿನ ಮಹಿಳಾ ಮತದಾನ ದಾಖಲಾಗಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ನಿತೀಶ್​ ಕುಮಾರ್​ ಸರ್ಕಾರದ ಮಹಿಳಾ ಪರ ಅಭಿವೃದ್ದಿ ಯೋಜನೆಗಳು, ರಾಜ್ಯದ ಹೆಣ್ಣುಮಕ್ಕಳಿಗೆ ನೆರವಾಗಿದ್ದು, ಈ ಕಾರಣದಿಂದಲೇ ಅನೇಕ ಮಹಾಮೈತ್ರಿಕೂಟದ ಮಹಿಳಾ ಮತದಾರರು ಕೂಡ ಎನ್​ಡಿಎಗೆ ಜೈ ಅಂದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಿಹಾರ ಸರ್ಕಾರ ಮಹಿಳೆಯರಿಗೆ 10,000 ರೂ. ಧನ ಸಹಾಯ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ವರವಾಗಿ ಪರಿಣಮಿಸಿರಬಹುದು. ಶೇ. 45 ರಷ್ಟು ಎನ್‌ಡಿಎಗೆ, ಶೇ. 40 ರಷ್ಟು ಮಹಾಘಟಬಂಧನ್‌ಗೆ ಮತ್ತು ಶೇ. 3 ರಷ್ಟು ಜನ ಮಹಿಳಾ ಮತದಾರರು ಸುರಾಜ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ನಿರುದ್ಯೋಗಿ ಯುವಕರ ಗಮನ ಯಾವ ಕಡೆ...?

ಬಿಹಾರದಲ್ಲಿ ನಿರುದ್ಯೋಗ ಸಮಸ್ಯೆ ಎನ್ನುವುದು ಬಗೆಹರಿಯದ ಸವಾಲು, ಅನೇಕ ಜನ ರಾಜ್ಯದಲ್ಲಿ ಉದ್ಯೋಗವಿಲ್ಲದ ಕಾರಣ ಬೇರೆ ರಾಜ್ಯಗಳನ್ನು ಆಶ್ರಯಿಸಬೇಕಾಗಿದೆ. ಸಮೀಕ್ಷೆಯ ಪ್ರಕಾರ ನಿರುದ್ಯೋಗಿ ಮತದಾರರಲ್ಲಿ ಶೇ. 49 ರಷ್ಟು ಜನರು ಮಹಾಘಟಬಂಧನ್ ಬೆಂಬಲಿಸಿದ್ದು, ಇತ್ತ ಆಡಳಿತರೂಢ ಎನ್‌ಡಿಎಗೆ ಶೇ. 34 ರಷ್ಟು ಜನರು ಬೆಂಬಲಿಸಿರುವ ಸಾಧ್ಯತೆ ಇದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net