ದೆಹಲಿ ಕಾರು ಸ್ಪೋಟ; ವೈಟ್​-ಕಾಲರ್ ಟೆರರ್ ಮಾಡ್ಯುಲ್, ರೆಡ್ ಕಾರ್ ಪತ್ತೆ; ತನಿಖೆಯಲ್ಲಿ ಹಲವು ವಿಚಾರ ಬೆಳಕಿಗೆ| Delhi car blast

ವಿಜಯವಾಣಿ - 2025-11-12T201859.681
Published on

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಮೀಪ ನಡೆದ 12 ಮಂದಿಯ ಸಾವಿಗೆ ಕಾರಣವಾದ ಕಾರು ಸ್ಫೋಟ(Delhi car blast) ಪ್ರಕರಣದಲ್ಲಿ ತನಿಖೆಯ ವೇಳೆ ವೈಟ್​-ಕಾಲರ್ ಟೆರರ್ ಮಾಡ್ಯುಲ್, ರೆಡ್ ಫೋರ್ಡ್ ಇಕೋಸ್ಪೋರ್ಟ್ ಕಾರು ಹಾಗೂ ಅಲ್​-ಫಲಾಹ್ ವಿಶ್ವವಿದ್ಯಾಲಯ ಸೇರಿ ಹಲವಾರು ಉಗ್ರ ಕೃತ್ಯದ ಭಾಗವಾದ ಅಂಶಗಳು ಬೆಳಕಿಗೆ ಬಂದಿವೆ.

ವೈಟ್-ಕಾಲರ್ ಟೆರರ್​ ಮಾಡ್ಯೂಲ್ ಮತ್ತು ಅಲ್​-ಫಲಾಹ್ ವಿವಿ ಲಿಂಕ್

ದೆಹಲಿ ಕಾರು ಸ್ಫೋಟ ಮತ್ತು 2,900 ಕೆಜಿ ಸ್ಪೋಟಕ ವಸ್ತುಗಳ ಸಾಗಾಣಿಕೆ ಪ್ರಕರಣದಲ್ಲಿ ಅಲ್​-ಫಲಾಹ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಸ್ಫೋಟವಾದ ಹುಂಡೈ ಐ20 ಕಾರಿನ ಚಾಲಕ ಪುಲ್ವಾಮಾದ ಡಾ.ಮೊಹಮ್ಮದ್ ಉಮರ್ ನಬಿ, ಡಾ. ಮುಜಮ್ಮಿಲ್ ಗನೈ ಹಾಗೂ ಡಾ. ಶಾಹೀನ್ ಸಯೀದ್ ಸೇರಿ ಒಟ್ಟು ಎಂಟು ಮಂದಿಯನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ.

ಈ ಎಲ್ಲಾ ಬಂಧಿತರು ಕಾಶ್ಮೀರ, ಹರಿಯಾಣ ಹಾಗೂ ಉತ್ತರ ಪ್ರದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿರುವ ವೈಟ್-ಕಾಲರ್ ಟೆರರ್​ ಮಾಡ್ಯೂಲ್ ಅನ್ನು ಬಹಿರಂಗಪಡಿಸಿದೆ.

ಆದರೆ ಘಟನೆಯಿಂದ ಅಲ್​-ಫಲಾಹ್ ವಿಶ್ವವಿದ್ಯಾಲಯವು ಅಂತರ ಕಾಯ್ದುಕೊಂಡಿದೆ. ಈ ಕುರಿತು ಪಿಟಿಐ ಜೊತೆ ಮಾತನಾಡಿರುಇವ ವಿಶ್ವವಿದ್ಯಾಲಯದ ಉಪಕುಲಪತಿ ಭೂಪಿಂದರ್ ಕೌರ್ ಆನಂದ್,  ನಮ್ಮ ಇಬ್ಬರು ವೈದ್ಯರನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿವೆ ಎಂದು ನಮಗೆ ತಿಳಿದುಬಂದಿದೆ. ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧಿಕೃತ ಸಾಮರ್ಥ್ಯದಲ್ಲಿ ಕೆಲಸ ಮಾಡುವುದನ್ನು ಹೊರತುಪಡಿಸಿ, ಆ ವ್ಯಕ್ತಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ವಿವಿಯ ಆವರಣದಲ್ಲಿ ಯಾವುದೇ ರಾಸಾಯನಿಕ ಅಥವಾ ವಸ್ತುವನ್ನು ಬಳಸುತ್ತಿಲ್ಲ, ಸಂಗ್ರಹಿಸುತ್ತಿಲ್ಲ  ಎಂದು ಹೇಳಿದೆ. ಪ್ರಯೋಗಾಲಯಗಳನ್ನು MBBS ವಿದ್ಯಾರ್ಥಿಗಳು ಮತ್ತು ಇತರ ಅಧಿಕೃತ ಕೋರ್ಸ್‌ಗಳ ಶೈಕ್ಷಣಿಕ ಮತ್ತು ತರಬೇತಿ ಅಗತ್ಯಗಳಿಗಾಗಿ ಮಾತ್ರ ಮತ್ತು ಪ್ರತ್ಯೇಕವಾಗಿ ಬಳಸಲಾಗುತ್ತದೆ. ಪ್ರತಿಯೊಂದು ಪ್ರಯೋಗಾಲಯ ಚಟುವಟಿಕೆಯನ್ನು ಸ್ಥಾಪಿತ ಸುರಕ್ಷತಾ ಪ್ರೋಟೋಕಾಲ್‌ಗಳು, ಶಾಸನಬದ್ಧ ಮಾನದಂಡಾನುಸಾರ ಪಾಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೆಂಪು ಕಾರು ಪತ್ತೆ

ಕಾರು ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಡಾ. ಉಮರ್ ಉನ್ ನಬಿಗೆ ಸಂಬಂಧಿಸಿದೆ ಎಂದು ಶಂಕಿಸಲಾದ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ದೆಹಲಿ ಪೊಲೀಸರು ಖಂಡವಾಲಿ ಎಂಬ ಗ್ರಾಮದ ಬಳಿಕ ಪತ್ತೆ ಹಚ್ಚಿದ್ದಾರೆ. ಸ್ಫೋಟದಲ್ಲಿ ಬಳಸಲಾಗಿದ್ದ ಹುಂಡೈ ಐ20 ಕಾರಿನ ಜೊತೆಗೆ ಹೆಚ್ಚುವರಿಯಾಗಿ ಶಂಕಿತರು ಮತ್ತೊಂದು ಕೆಂಪು ಕಾರನ್ನು ಹೊಂದಿದ್ದಾರೆಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದರು. ಬಳಿಕ ಆ ಕಾರಿಗೆ ಲುಕ್​ಔಟ್ ನೋಟಿಸ್ ನೀಡಲಾಗಿತ್ತು.

ಹುಂಡೈ ಕಾರು ಡೀಲರ್ ಬಂಧನ

ಸ್ಫೋಟವಾದ ಹುಂಡೈ ಐ20 ಕಾರಿನ ಮಾರಾಟಕ್ಕೆ ಸಹಾಯ ಮಾಡಿದ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕವು ಫರಿದಾಬಾದ್ ಮೂಲದ ಕಾರು ವ್ಯಾಪಾರಿ ಮತ್ತು ರಾಯಲ್ ಕಾರ್ ಪ್ಲಾಜಾದ ಮಾಲೀಕ ಅಮಿತ್ ಅವರನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಹುಂಡೈ ಐ20 ಕಾರನ್ನು ಯಾರು ಶೋ ರೂಂಗೆ ತಂದರು?, ಶಂಕಿತ ಡಾ. ಉಮರ್ ನಬಿ ಯಾರ ಮೂಲಕ ಕಾರು ಖರೀದಿಸಿದ ಎಂಬುದನ್ನು ತನಿಖಾಧಿಕಾರಿಗಳು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲ್ಪಟ್ಟವರ ಜೊತಗೆ ಸಂಪರ್ಕ, ಸಂಬಂಧ ಹೊಂದಿದ್ದವರು ಸೇರಿ  ಒಂದು ಡಜನ್ ವ್ಯಕ್ತಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net