

ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿಗೆ ಮತ್ತಷ್ಟು ಶಕ್ತಿ ತುಂಬಿರುವುದು ತೆಂಗು ಮತ್ತು ಕಂಗು (ಅಡಕೆ). ಇವುಗಳ ಸಮೃದ್ಧವಾದ ಬೆಳೆಗೆ ಕರ್ನಾಟಕ ಹೆಸರುವಾಸಿ. ತೆಂಗು, ಅಡಕೆ ಬರೀ ವಾಣಿಜ್ಯ ಬೆಳೆಯಾಗಿ ಮಾತ್ರವಲ್ಲ ಇಲ್ಲಿನ ಜನರೊಂದಿಗೆ ಭಾವನಾತ್ಮಕ ಬಂಧವನ್ನೂ ಸ್ಥಾಪಿಸಿದೆ. ಬೆಳೆಗಾರರ ಆರ್ಥಿಕ ಬೆಳವಣಿಗೆಗೂ ಇಂಬು ನೀಡುತ್ತಿದೆ. ಯಾವುದೇ ಶುಭ ಸಮಾರಂಭವಿರಲಿ ತೆಂಗು, ಅಡಕೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ದಿನನಿತ್ಯದ ಬಳಕೆಯಲ್ಲೂ ಇವರೆಡಕ್ಕೂ ಪ್ರಮುಖ ಸ್ಥಾನ. ಅಡುಗೆಗೆ ತೆಂಗು ಬೇಕೇಬೇಕು. ಊಟದ ಬಳಿಕ ಅಡಕೆ ಜತೆ ಕವಳ ಇಲ್ಲದಿದ್ದರೆ ಹೇಗೆ...
ಅಡಕೆಯ ಒಗರು: ಭಾರತದಲ್ಲಿ ಅತಿ ಹೆಚ್ಚು ಅಡಕೆ ಉತ್ಪಾದನೆಯಾಗುವುದು ಕರ್ನಾಟಕದಲ್ಲೇ. ಅಲ್ಲದೆ, ನಮ್ಮ ದೇಶದ ಒಟ್ಟು ಅಡಕೆ ಉತ್ಪಾದನೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಕರ್ನಾಟಕದ್ದಾಗಿದ್ದು, ವಾರ್ಷಿಕ ಆರು ಲಕ್ಷ ಟನ್ಗಿಂತಲೂ ಅಧಿಕ ಅಡಕೆ ಉತ್ಪಾದನೆಯಾಗುತ್ತಿದೆ. ರಾಜ್ಯದ 140ಕ್ಕೂ ಹೆಚ್ಚು ತಾಲೂಕುಗಳಲ್ಲಿ ಈ ವಾಣಿಜ್ಯ ಬೆಳೆ ವಿಸ್ತರಿಸಿಕೊಂಡಿರುವುದು, ಅಡಕೆಯ ಮಹಿಮೆಗೆ ಸಾಕ್ಷಿ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ತುಮಕೂರುವರೆಗೂ ಅಡಕೆ ತೋಟಗಳು ಕಾಣಸಿಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಅಡಕೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಮುಖ್ಯವಾಗಿ, ಮಲೆನಾಡಿನ ಭಾಗದ ರೈತರ ಜೀವನಾಡಿ ಈ ಅಡಕೆ ಬೇಸಾಯ. ತೆಳುವಾದ ಉದ್ದ-ಉದ್ದನೆಯ ಮರಗಳ ತೋಪನ್ನು ನೋಡುವುದೇ ಕಣ್ಣಿಗೆ ಹಬ್ಬ. ತೆಂಗು-ಈಚಲ ಮರಗಳ ಪ್ರಭೇದಕ್ಕೆ ಸೇರಿದ ಅಡಕೆ ಮರ ನೆಟ್ಟಿದ ಐದು ವರ್ಷಗಳಲ್ಲಿ ಫಲ ನೀಡಲಾರಂಭಿಸುತ್ತದೆ. ಸುಮಾರು 60 ವರ್ಷಗಳ ಕಾಲ ಫಲ ನೀಡುತ್ತವೆ. ಪ್ರತಿವರ್ಷ ನವೆಂಬರ್-ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ ಎತ್ತರದ ಅಡಕೆ ಮರಗಳಿಂದ ಫಸಲನ್ನು ಇಳಿಸುವುದು, ಅಡಕೆ ಕಾಯಿಗಳಿಂದ ಅಡಕೆಯನ್ನು ಬೇರ್ಪಡಿಸಿ ಹದವಾಗಿ ಬೇಯಿಸಿ ದಿನಗಟ್ಟಲೆ ಬಿಸಿಲಿಗೆ ಒಣಗಿಸುವ ಪ್ರಕ್ರಿಯೆಯೇ ವಿಶಿಷ್ಟ. ಸಿರ್ಸಿ ಅಡಕೆ ಮತ್ತು ಕ್ಯಾಸನೂರು ಅಡಕೆಗೆ ಭರ್ಜರಿ ಬೇಡಿಕೆ ಇದೆ. ಪಾನ್ ಮಸಾಲಾ, ಬೀಡಾ ತಾಂಬೂಲಗಳಲ್ಲಿ ಉಪಯೋಗಿಸುವ ಅಡಕೆಗೆ ತನ್ನದೇ ಆದ ಧಾರ್ವಿುಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಅಡಕೆಯ ಮೌಲ್ಯವರ್ಧನೆಯ ಪ್ರಯತ್ನಗಳು ಕೂಡ ತೀವ್ರಗೊಂಡಿವೆ. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಲು ಪರಿಸರಕ್ಕೆ ಪೂರಕವಾದ ಉತ್ಪನ್ನವಾಗಿ ಅಡಕೆ ಹಾಳೆಗಳನ್ನು ಬಳಸಲಾಗುತ್ತಿದೆ. ಇದು ಕೂಡ ವ್ಯವಸ್ಥಿತ ಮಾರುಕಟ್ಟೆಯ ಸ್ವರೂಪವನ್ನು ಪಡೆದುಕೊಂಡಿರುವುದು ವಿಶೇಷ.
ತೆಂಗಿನ ವೈವಿಧ್ಯ
ಕಲ್ಪವೃಕ್ಷ ಎಂದೇ ಕರೆಯಲ್ಪಡುವ ತೆಂಗಿನ ಬೆಳೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ವರ್ಷಪೂರ್ತಿ ಫಲ ನೀಡುವ ತೆಂಗಿನ ಮರ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಹೇರಳ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಕೋಲಾರ, ರಾಮನಗರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ತೆಂಗು ಬೆಳೆಯುವ ಪ್ರಮುಖ ಜಿಲ್ಲೆಗಳಾಗಿವೆ. ಔಷಧ, ಅಡುಗೆ, ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸಲ್ಪಡುವ ತೆಂಗು ಮತ್ತು ತೆಂಗಿನ ಎಣ್ಣೆ ಬೆಳೆಗಾರರಿಗೆ ಜೀವನೋಪಾಯದ ಮಾಧ್ಯಮವೂ ಆಗಿದೆ. ತೋಟಗಾರಿಕೆ ಇಲಾಖೆ ಅಂಕಿಅಂಶದ ಪ್ರಕಾರ ರಾಜ್ಯದ 4.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ರಾಜ್ಯದ ತೋಟಗಾರಿಕೆಯಲ್ಲಿ ತೆಂಗು ಶೇಕಡ 26ರಷ್ಟು ಪಾಲು ಹೊಂದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕೊಂದರಲ್ಲೇ ಸುಮಾರು 50-60 ಲಕ್ಷ ತೆಂಗಿನ ಮರಗಳಿರುವುದು, ಈ ಬೆಳೆಯ ವಿಸ್ತಾರಕ್ಕೆ ಸಾಕ್ಷಿ. ದೇಶದ ಪ್ರಮುಖ ಐದು ತೆಂಗು ಉತ್ಪಾದಕ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರಸ್ಥಾನವಿದ್ದು, ತೆಂಗಿಗೆ ಸಂಬಂಧಿಸಿ ರಾಜ್ಯದಲ್ಲಿ 236 ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಇವು ಬೆಳೆಗಾರರಿಗೆ ಕಾಲಕಾಲಕ್ಕೆ ಮಾರ್ಗದರ್ಶನವನ್ನೂ ನೀಡುತ್ತಿವೆ. ರಾಜ್ಯದ ಎಳನೀರಿಗೆ ಹೊರರಾಜ್ಯಗಳಲ್ಲೂ ಭಾರಿ ಬೇಡಿಕೆ ಇದೆ. ತೆಂಗು ಅಭಿವೃದ್ಧಿ ಮಂಡಳಿಯು ರೈತರಿಗೆ ನೆರವಾಗುತ್ತಿದೆ. ಹೈನುಗಾರಿಕೆ ನಂತರ ಅತಿ ಹೆಚ್ಚು ಆದಾಯ ನೀಡುವ ತೆಂಗು ಪರಂಪರೆಯ ಪ್ರತೀಕವಾಗಿ, ವರ್ತಮಾನದ ಭರವಸೆಯಾಗಿ ಕೈಹಿಡಿದಿದೆ.
ಪ್ರಮುಖ ತಳಿಗಳು: ಕ್ಯಾಸನೂರು ಸೀಮೆ ನಾಟಿ ಅಡಕೆ, ಸುಮಂಗಳಾ, ಸ್ವರ್ಣಮಂಗಳ, ಪಾಂಡವರ ಅಡಕೆ, ಇಂಟರ್ ಮಂಗಳ, ಮೋಹಿತ್ ನಗರ, ಶ್ರೀಮಂಗಲ
ಮುಖ್ಯಾಂಶಗಳು