

CM Siddaramaiah: ಇಂದು ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಂತರ ಬೆಳಗಾವಿಯಲ್ಲಿ ನಡೆಸುವ ಉದ್ಯೋಗ ಮೇಳ ಕುರಿತು ಮಾತನಾಡಿದರು.
"ನಾವು ರಾಜ್ಯದ ಪ್ರತಿ ವಿಭಾಗ ಮಟ್ಟದಲ್ಲಿ ಉದ್ಯೋಗ ಮೇಳ ಮಾಡುತ್ತಿದ್ದೇವೆ. ಉದ್ಯೋಗ ಕೊಡುವವರನ್ನು, ಉದ್ಯೋಗ ಆಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಕರೆತರುತ್ತಿದ್ದೇವೆ. ಬೆಂಗಳೂರು ಬಳಿಕ ಈಗ ಕಲಬುರಗಿಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡುತ್ತಿದ್ದೇವೆ. ಉದ್ಯೋಗ ಮೇಳದಲ್ಲಿ 27 ಸಾವಿರ ಜನ ಅಭ್ಯರ್ಥಿಗಳು ರಿಜಿಸ್ಟ್ರೆಷನ್ ಮಾಡಿಸಿದ್ದಾರೆ" ಎಂದರು.
"ನಮ್ಮ ದೇಶದಲ್ಲಿ ನಿರುದ್ಯೋಗ ಅತೀ ದೊಡ್ಡ ಸಮಸ್ಯೆಯಾಗಿದೆ. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುಂಚೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯೂ ಹೇಳಿದ್ದರು. ಆದರೆ, 10 ವರ್ಷಗಳಲ್ಲಿ ಕೇವಲ 20 ಲಕ್ಷ ಉದ್ಯೋಗ ಕೂಡ ಸೃಷ್ಟಿಸಿಲ್ಲ" ಎಂದು ಲೇವಡಿ ಮಾಡಿದರು.
"ಮೋದಿಯವರು ಸುಳ್ಳು ಹೇಳಿ, ಉದ್ಯೋಗ ಕೊಡಲಿಲ್ಲ. ಇದು ಈ ದೇಶದ ಯುವ ಜನತೆ ಅರ್ಥ ಮಾಡಿಕೊಳ್ಳಬೇಕು. ಆದರೆ, ನಾವು ಅಧಿಕಾರಕ್ಕೆ ಏರುವ ಮುಂಚೆಯೇ ಐದು ಗ್ಯಾರಂಟಿ ನೀಡುವುದಾಗಿ ಹೇಳಿದ್ದೆವು. ಕೊಟ್ಟ ಮಾತಿನಂತೆ ಈಗ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಯುವನಿಧಿ ಯೋಜನೆಯಡಿಯಲ್ಲಿ ತಿಂಗಳಿಗೆ 3000 ರೂ. ಕೊಡಲಾಗ್ತಿದೆ. ಎಲ್ಲರಿಗೂ ಕೌಶಲ್ಯ ತರಬೇತಿ ನೀಡಿದಾಗ ಮಾತ್ರ ಉದ್ಯೋಗ ಲಭಿಸಲು ಸಾಧ್ಯ" ಎಂದರು.
"ನಮ್ಮ ಉದ್ದೇಶ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು. ಉದ್ಯೋಗ ಮೇಳದಲ್ಲಿ ಕೆಲಸ ಸಿಗಲಿಲ್ಲ ಎಂದು ನಿರಾಶೆಯಾಗೋದು ಬೇಡ. ಕರ್ನಾಟಕ ರಾಜ್ಯದಲ್ಲಿ ಶೇ. 2.5ರಷ್ಟು ನಿರುದ್ಯೋಗವಿದೆ. ಉಳಿದ ರಾಜ್ಯಗಳಿಗಿಂತ ಕಡಿಮೆ ಇದೆ" ಎಂದು ಹೇಳಿದರು.