

ಪಂಚನಹಳ್ಳಿ: ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂಬುದಕ್ಕೆ ಸಿಂಗಟಗೆರೆ ಸಮೀಪದ ಕಲ್ಲೇಲಿಂಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಿದರ್ಶನ. ಗ್ರಾಮಸ್ಥರ ಜತೆಗೆ ಹಿರಿಯ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿದ್ದು ಶಾಲೆ ಅಭಿವೃದ್ಧಿಗೆ ಚರ್ಚೆ ನಡೆಸುತ್ತಾರೆ. ಇದೆಲ್ಲದರ ಫಲವಾಗಿ ಶಾಲೆಯಲ್ಲಿ ಇಲ್ಲ ಎಂಬ ಪದಕ್ಕೆ ಆಸ್ಪದವೇ ಇಲ್ಲದಂತೆ ಮಾಡಿದ್ದಾರೆ.
ಗ್ರಾಮಸ್ಥರು ಮತ್ತು ಹಳೇ ವಿದ್ಯಾರ್ಥಿಗಳು ಹಣ ಮತ್ತು ವಸ್ತುಗಳನ್ನು ಶಾಲೆಗೆ ಕೊಡುಗೆ ನೀಡುತ್ತಿರುವುದು ಅಭಿವೃದ್ಧಿಗೆ ಸಹಕರಿಯಾಗಿದೆ. ಶಾಲೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಹಿರಿಯ ವಿದ್ಯಾರ್ಥಿ ಅನ್ನಪೂರ್ಣಾ ಕಲ್ಲೇಶಪ್ಪ ದಂಪತಿ ಮಕ್ಕಳಾದ ಪವನ್ ಮತ್ತು ಮೋಹನ್ ಶಾಲೆಗೆ ಸುಮಾರು 50 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಟಿವಿ ಕೊಡಿಸಿದ್ದಾರೆ. ಹರೀಶ್ ಎಂಬುವವರು 50 ಸಾವಿರ ರೂ. ಮೌಲ್ಯದ ಕಂಪ್ಯೂಟರ್ ಕೊಡಿಸಿದ್ದಾರೆ. ಇತ್ತೀಚೆಗೆ ಶಾಲೆಗೆ ವರ್ಗವಾಗಿ ಬಂದ ಶಿಕ್ಷಕ ಎಚ್.ಎಸ್.ಪ್ರಾಣೇಶ್ ಅವರ ಮನವಿ ಮೇರೆಗೆ ಬೆಂಗಳೂರಿನ ಸುಮಂಗಲಿ ಸೇವಾಶ್ರಮದವರು ಸುಮಾರು 1.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಪೀಠೋಪಕರಣಗಳನ್ನು ದಾನವಾಗಿ ನೀಡಿದ್ದಾರೆ. ಅನೇಕ ಹಿರಿಯ ವಿದ್ಯಾರ್ಥಿಗಳು ಹಣದ ರೂಪದಲ್ಲಿ ದೇಣಿಗೆ ನೀಡಿದ್ದು, ಎಸ್‌ಡಿಎಂಸಿ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇತ್ತೀಚೆಗೆ ಶಾಲೆಗೆ ಬಣ್ಣ ಮಾಡಿಸಲಾಗಿದೆ. ಸಿಂಗಟಗೆರೆ ಗ್ರಾಪಂ ಬಣ್ಣಕ್ಕೆ ಹಣ ನೀಡಿದರೆ, ಗ್ರಾಮಸ್ಥರು ಬಣ್ಣ ಹೊಡೆಯುವವರ ಕೂಲಿ ಮತ್ತಿತರೆ ಖರ್ಚನ್ನು ನಿಭಾಯಿಸಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಈ ಅಭಿವೃದ್ಧಿ ಉಳಿದ ಶಾಲೆಗಳಿಗೆ ಮಾದರಿಯಾಗಿದೆ.
ಕಂಪ್ಯೂಟರ್, ಇಂಗ್ಲಿಷ್‌ಗೂ ಒತ್ತು: ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣದ ಜತೆಗೆ ಇಂಗ್ಲಿಷ್ ಕಲಿಕೆಗೂ ಹೆಚ್ಚಿನ ಒತ್ತು ನೀಡಲಾಗಿದೆ. 3 ಕಂಪ್ಯೂಟರ್‌ಗಳಿದ್ದು ಮಕ್ಕಳಿಗೆ ಕಂಪ್ಯೂಟರ್ ಕಲಿಸಲಾಗುತ್ತಿದೆ. ಜತೆಗೆ ಇಂಗ್ಲಿಷ್ ಕಲಿಕೆಗೂ ಒತ್ತು ನೀಡುತ್ತಿರುವುದರಿಂದ ಪಾಲಕರಿಗೆ ಖಾಸಗಿ ಶಾಲೆಗಳ ವ್ಯಾಮೋಹ ಕಡಿಮೆಯಾಗಿದೆ. ಬೇರೆಡೆ ಸರ್ಕಾರಿ ಶಾಲೆಗಳಂತೆ ಇಲ್ಲಿ ಮಕ್ಕಳ ಕೊರತೆ ಉಂಟಾಗಿಲ್ಲ.
ಪ್ರಚಾರವಿಲ್ಲದ ಸೇವೆ: ಸುಮಾರು 13 ವರ್ಷಗಳಿಂದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ಮಂಜುಳಾ ಪ್ರಚಾರ ಬಯಸದೆ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಶಾಲೆಗೆ ಬಂದರೆ ಸಂಜೆ 6 ಗಂಟೆಯಾದರೂ ಮನೆಗೆ ಹೋಗುವುದಿಲ್ಲ. ಮಕ್ಕಳಿಗೆ ಕಲಿಸಬೇಕೆನ್ನುವ ತೀವ್ರ ತುಡಿತ ಅವರಲ್ಲಿದೆ. ಅವರಿಂದಾಗಿಯೇ ಶಾಲೆ ಇಷ್ಟು ಅಭಿವೃದ್ಧಿ ಹೊಂದಿದೆ. ಮಂಜುಳಾ ದಂಪತಿ ವರ್ಷಕ್ಕೊಮ್ಮೆ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ಕೊಡಿಸುತ್ತಾರೆ. ಪ್ರತಿ ವರ್ಷ 5ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸುವ ಓರ್ವ ವಿದ್ಯಾರ್ಥಿಗೆ ಸ್ವಂತ ಹಣದಲ್ಲಿ ಬಂಗಾರದ ನಾಣ್ಯವನ್ನು ಬಹುಮಾನವಾಗಿ ನೀಡುತ್ತಾರೆ. ಮಂಜುಳಾ ಅವರ ಇಬ್ಬರು ಮಕ್ಕಳು ವೈದ್ಯರಾಗಿರುವುದರಿಂದ ಪ್ರತಿ ವರ್ಷ ಮಕ್ಕಳನ್ನು ಕರೆಸಿ ಶಾಲೆಯ ವಿದ್ಯಾರ್ಥಿಗಳ ಉಚಿತ ಆರೋಗ್ಯ ತಪಾಸಣೆ ನಡೆಸುತ್ತಾರೆ. ಹಾಗಾಗಿ ಶಿಕ್ಷಕಿ ಮಂಜುಳಾ ಅವರನ್ನು ಶಾಲೆಯ ತಳಹದಿ ಎಂದರೂ ತಪ್ಪಾಗದು ಎನ್ನುತ್ತಾರೆ ಗ್ರಾಮಸ್ಥರು.
ಉಲ್ಟಾ ಮಗ್ಗಿ: ಮಕ್ಕಳಿಗೆ ಶಿಕ್ಷಕರು ನೀಡುವ ಮನೆ ಕೆಲಸವನ್ನು ಪಾಲಕರು ಮುತುವರ್ಜಿವಹಿಸಿ ಮಾಡಿಸುತ್ತಾರೆ. ಇದರಿಂದ ಮಕ್ಕಳು ಓದಿನಲ್ಲಿ ಸಾಕಷ್ಟು ಮುಂದಿದ್ದಾರೆ. ಶಾಲೆಯ ಅನೇಕ ಮಕ್ಕಳು ಅವರ ವಯಸ್ಸಿಗೆ ಅನುಗುಣವಾಗಿ 20-30ರವರೆಗಿನ ಮಗ್ಗಿಯನ್ನು ಉಲ್ಟಾ ಹೇಳುತ್ತಾರೆ.
ಮಹಿಳೆಯರಿಗೆ ಶಾಲೆ ಬಗ್ಗೆ ಹೆಚ್ಚಿನ ಆಸಕ್ತಿ:
ಪಾಲಕರಲ್ಲಿ ತಾಯಂದಿರೇ ಶಾಲೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಶಾಲೆ ಅಭಿವೃದ್ಧಿಯಲ್ಲಿ ಶಿಕ್ಷಕಿ ಮಂಜುಳಾ ಕರೆದರೆ ಅಷ್ಟೂ ಮಕ್ಕಳ ತಾಯಂದಿರು ಶಾಲೆಯಲ್ಲಿ ಹಾಜರಿರುತ್ತಾರೆ. ಶಾಲೆ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತಾಯಂದಿರ ಕೊಡುಗೆ ಅಪಾರ ಎನ್ನುತ್ತಾರೆ ಮುಖ್ಯಶಿಕ್ಷಕಿ ಮಂಜುಳಾ.
ಕೊಠಡಿಗಳಿಗೆ ಹೈಟೆಕ್ ಸ್ಪರ್ಶ: ಶಿಕ್ಷಣ ಇಲಾಖೆ, ಗ್ರಾಪಂ ಮತ್ತು ಸಾರ್ವಜನಿಕರ ಸಹಕಾರದಿಂದ ಶಾಲೆಯ ಎಲ್ಲ ಕೊಠಡಿಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಮಕ್ಕಳಿಗೆ ಊಟದ ಕೋಣೆ, ಗ್ರಂಥಾಲಯ, ನಲಿಕಲಿ ಕೊಠಡಿ ಮತ್ತು ಶೌಚಗೃಹಗಳಿದ್ದು ಎಲ್ಲ ಕೊಠಡಿಗಳಿಗೂ ಹೈಟೆಕ್ ಸ್ಪರ್ಶ ನೀಡಲಾಗಿದೆ. ಶೌಚಗೃಹವನ್ನು ಪ್ರತಿನಿತ್ಯ ಮುಖ್ಯಶಿಕ್ಷಕಿ ಮಂಜುಳಾ ಅವರೇ ಸ್ವಚ್ಛಗೊಳಿಸುತ್ತಾರೆ. ದಾನಿಗಳ ಸಹಕಾರದಿಂದ ಅಡುಗೆ ಮನೆಯಲ್ಲಿ ಮಕ್ಕಳಿಗೆ ಊಟ ಮಾಡಲು ಬೆಂಚುಗಳನ್ನು ನಿರ್ಮಿಸಲಾಗಿದೆ. ಅಡುಗೆ ಸಹಾಯಕರು ಸದಾ ಸಮವಸ್ತ್ರ ಧರಿಸಿಯೇ ಕರ್ತವ್ಯದಲ್ಲಿ ತೊಡಗುತ್ತಾರೆ.
ಶಾಲೆಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯಲ್ಲಿ ಅವಕಾಶವಿಲ್ಲ ಎನ್ನುತ್ತಾರೆ. ಆದರೆ ಸಿಂಗಟಗೆರೆ ಗ್ರಾಪಂ ನಮ್ಮೂರಿನ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದೆೆ. ಜತೆಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆ ಸಹಕಾರ ಅಪಾರ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎನ್.ನಾಗರಾಜ್.
ತಾಲೂಕಿನಲ್ಲಿರುವ ಅತ್ಯುತ್ತಮ ಶಾಲೆಗಳಲ್ಲಿ ಕಲ್ಲೇಲಿಂಗನಹಳ್ಳಿ ಶಾಲೆ ಕೂಡ ಒಂದು. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರೂ ಶಿಕ್ಷಕರು ಸಮರ್ಪಣಾಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ. ತಾಲೂಕಿಗೆ ಮಾದರಿ ಶಾಲೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎನ್ನುತ್ತಾರೆ ಕಡೂರು ಬಿಇಒ ಸಿದ್ದರಾಜನಾಯ್ಕ.