

ಹೈದರಾಬಾದ್: ಕಳೆದ ತಿಂಗಳು ಜೂ. 27ರಂದು ಜಾಗತಿಕವಾಗಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್ ಸ್ಟಾರ್, ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಮಿಂಚಿನ ಓಟವನ್ನು ಮುಂದುವರೆಸಿದೆ. ನಾಗ್ ಅಶ್ವಿನ್ ನಿರ್ದೇಶನ ಈ ಸಿನಿಮಾ ಬಹುತೇಕ ಚಿತ್ರಮಂದಿಗಳಲ್ಲಿ ರಿಲೀಸ್ ಆಗಿದ್ದು, ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆಯಿತು. ನಂತರದ ದಿನಗಳಲ್ಲಿಯೂ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯುತ್ತಿರುವ ಕಲ್ಕಿ, ಸದ್ಯ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುವತ್ತ ಸಾಗುತ್ತಿದೆ.
ಪ್ರಸ್ತುತ ಟಾಲಿವುಡ್ ಚಿತ್ರಗಳ ಪೈಕಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿರುವ ಪ್ರಭಾಸ್ 'ಕಲ್ಕಿ', ಇಂದಿಗೂ ಸಹ ಚಿತ್ರಮಂದಿಗಳತ್ತ ಪ್ರೇಕ್ಷಕರನ್ನು ಕರೆತರುವಲ್ಲಿ ಮುಂಚೂಣಿಯಲ್ಲಿದೆ. ಸಾಧಾರಣ ದಿನಗಳಲ್ಲಿ ಉತ್ತಮ ಕಲೆಕ್ಷನ್ ಕಾಣುತ್ತಿರುವ ಚಿತ್ರ, ವಾರಾಂತ್ಯದಲ್ಲಿ ನಿರೀಕ್ಷೆಗೂ ಮೀರಿ ಆದಾಯ ಮಾಡುತ್ತಿದೆ. ಇದು ಚಿತ್ರತಂಡಕ್ಕೆ ಭಾರೀ ಸಂತಸ ನೀಡಿದೆ. ಬಿಡುಗಡೆಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿರುವ ಕಲ್ಕಿ, ಇತರೆ ದೇಶಗಳ ಚಿತ್ರಮಂದಿರಗಳಲ್ಲಿ ಸಹ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಪ್ರಭಾಸ್ ಚಿತ್ರ 800 ಕೋಟಿ ರೂ. ಕಲೆಕ್ಷನ್ ಮಾಡಿದೆ. ಟಾಲಿವುಡ್ನ 'ಬಾಹುಬಲಿ', 'ಆರ್ಆರ್ಆರ್' ಸಿನಿಮಾಗಳ ಪೈಕಿ ಈ ಮೈಲಿಗಲ್ಲು ಸಾಧಿಸಿದ ಮೂರನೇ ಸಿನಿಮಾ ಇದಾಗಿದೆ. ಶೀಘ್ರವೇ 1000 ಕೋಟಿ ರೂ. ಕ್ಲಬ್ ಸೇರಲಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್, ಅಮಿತಾಬ್ ಬಚ್ಚನ್, ದಿಶಾ ಪಟಾನಿ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).