

ತಲೆಯ ಮೇಲೆ ಇಟ್ಟುಕೊಳ್ಳುವ ಪೇಟದ ಒಳಗಿರುವ ಕೊಳಕನ್ನು, ಪಂಚೆ ನಿರಿಯ ಒಳಗಿರುವ ಹರಿದ ಭಾಗವನ್ನು ಬಟ್ಟೆ ಒಗೆಯುವ ಅಗಸನಿಗೆ ಮಾತ್ರ ಹೇಳುವುದು ತಾನೆ? ಅದನ್ನು ಪೂರ್ತಿ ಲೋಕಕ್ಕೇ ತಿಳಿಸುತ್ತೀಯಾ? ನಿನ್ನ ಅಳು-ದುಗುಡಗಳನ್ನು ನಿನ್ನಲ್ಲೇ ಬಚ್ಚಿಟ್ಟುಕೋ, ಅದನ್ನು ಭೂಮಿಗೆ ಯಾಕೆ ಹರಡುತ್ತಿ ಎಂದು ಪ್ರಶ್ನಿಸುತ್ತದೆ ಈ ಕಗ್ಗ.
ಜೀವನದಲ್ಲಿ ಕಷ್ಟ-ನಷ್ಟಗಳಿಗೆ ಒಳಗಾಗದಿರುವ, ಸಮಸ್ಯೆಗಳೇ ಇಲ್ಲದಿರುವ ವ್ಯಕ್ತಿಗಳು ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ತೊಂದರೆಗೆ ಒಳಗಾಗಿರುತ್ತಾರೆ.ಬದುಕಿನ ಕಷ್ಟಗಳನ್ನು ಹೇಗೆ ಸ್ವೀಕರಿಸುತ್ತಾನೆ ಎನ್ನುವುದರ ಆಧಾರದಲ್ಲಿ ಆ ಕಷ್ಟವು ಎಷ್ಟು ಘನವಾದದ್ದು ಎಂದು ನಿರ್ಧರಿತವಾಗುತ್ತದೆ. ಕೆಲವರು ಸಣ್ಣ ತೊಡಕುಗಳಿಗೂ ವಿಚಲಿತರಾಗುತ್ತಾರೆ. ಎಲ್ಲರಲ್ಲೂ ಹೇಳಿಕೊಳ್ಳುತ್ತಾ ಅನುಕಂಪ ಗಿಟ್ಟಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಅವಕಾಶವನ್ನು ಸೃಷ್ಟಿಸಿಕೊಳ್ಳುವವರೂ ಇಲ್ಲದಿಲ್ಲ. ಇನ್ನು ಕೆಲವರು ಸಹಿಸಲಸಾಧ್ಯವಾದ ಸಂಕಷ್ಟದಲ್ಲಿದ್ದರೂ ಯಾರೊಡನೆಯೂ ಹಂಚಿಕೊಳ್ಳುವುದಿಲ್ಲ. ಒಳಗೊಳಗೆ ನರಳುತ್ತಿರುತ್ತಾರೆ. ಚಿಂತೆಯು ತೀವ್ರಗೊಂಡಾಗ ಖಿನ್ನತೆಗೆ ಒಳಗಾಗುವುದು, ಬದುಕನ್ನೇ ಒಗೆದು ಬಿಡುವುದೂ ಇದೆ.
ಮೇಲಿನ ಎರಡೂ ಮನಃಸ್ಥಿತಿಗಳೂ ಹಿತಕಾರಿಯಲ್ಲ. ತಲೆಗೇರಿಸುವ ಪೇಟದ ಒಳಭಾಗವು ಕೊಳೆಯಾಗಿದ್ದರೆ ಅದನ್ನು ದಾರಿಹೋಕರಿಗೆಲ್ಲರಿಗೂ ತೋರಿಸುತ್ತಾ ನಡೆಯುವುದೇನು? ಪಂಚೆಯ ನಿರಿಯು ಹರಿದಿದೆ ಎಂದಾದರೆ,ಅದನ್ನು ರಜಕನಿಗಲ್ಲದೆ ಎದುರಾದವರಿಗೆಲ್ಲರಿಗೂ ಹೇಳುತ್ತಾ ನಡೆಯಲುಂಟೇ? ಕೊಳೆಯನ್ನು ತೊಳೆಯಲು, ಹರುಕನ್ನು ಗಮನಿಸಿ ಎಚ್ಚರದಿಂದ ಒಗೆಯಲು ಅಗಸನಿಗೆ ತಿಳಿಸುವುದು ಅಗತ್ಯ ಮತ್ತು ಅನಿವಾರ್ಯ. ತನ್ಮೂಲಕ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಥವಾ ಅದು ಬಿಗಡಾಯಿಸದಂತೆ ಎಚ್ಚರ ವಹಿಸುವುದು ಸಾಧ್ಯವಾಗುತ್ತದೆ. ಅಂತೆಯೇ ಸಹಿಸಲು ಅಸಾಧ್ಯ ವಾದ ವೈಯಕ್ತಿಕ ನೋವು-ಸಂಕಟಗಳನ್ನು ಯಾರ ಬಳಿಯಾದರೂ ಹೇಳಿಕೊಳ್ಳಬೇಕು, ಸಾಂತ್ವನವನ್ನಾದರೂ ಪಡೆಯಬೇಕೆನ್ನಿಸಿದರೆ, ಅದು ಖಂಡಿತಾ ತಪ್ಪಲ್ಲ. ಎಲ್ಲರಲ್ಲಿ ಹಂಚಿಕೊಳ್ಳುವುದು, ಲೋಕಕ್ಕೆ ತಿಳಿಯುವಂತೆ ಮಾಡುವುದು ಖಂಡಿತಾ ಸರಿಯಲ್ಲ.
ಸಮಸ್ಯೆಯನ್ನು ಹೃದಯದಿಂದ ಆಲಿಸಿ ಪರಿಹಾರವನ್ನು ಸೂಚಿಸಬಲ್ಲವರು ಪರಿಚಿತ ವಲಯದಲ್ಲಿ ಇದ್ದೇ ಇರುತ್ತಾರೆ. ಅಂತಹ ಆತ್ಮೀಯರೊಡನೆ ಹೇಳಿ ಕೊಳ್ಳುವುದು ಸೂಕ್ತ. ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಮುಖ್ಯ ವಾಗಬೇಕು. ಹಾಗೆಯೇ ಎಲ್ಲರೂ ಅಂತಃಕರಣದಿಂದ ಇನ್ನೊಬ್ಬರ ನೋವುಗಳನ್ನು ಕೇಳುವುದಿಲ್ಲ. ಸಮಸ್ಯೆಯನ್ನು ಸೂಕ್ಷ್ಮವಾಗಿ ಅರ್ಥೈಸಿ ಕೊಳ್ಳುವ ಕೌಶಲವೂ ಅವರಲ್ಲಿರುವುದಿಲ್ಲ. ಪುಕ್ಕಟೆ ಸಲಹೆಗಳನ್ನು ನೀಡಿ ದಾರಿ ತಪ್ಪಿಸುವ, ನೋವು ಹಂಚಿಕೊಂಡವರಲ್ಲಿ ತಮ್ಮ ಸುಖಜೀವಿತವನ್ನು ಹೇಳಿಕೊಂಡು ಬೀಗುವ, ಆಲಿಸಿದ ವಿಷಯಕ್ಕೆ ತಮ್ಮದೇ ಕಲ್ಪನೆಗಳನ್ನು ಸೇರಿಸಿ ಅವರಿವರಿಗೆ ಹೇಳುವ ಕೆಟ್ಟ ಪ್ರವೃತ್ತಿ ಇರುತ್ತದೆ. ಇಂಥವರಿಂದ ಹಾನಿಯೂ ಆಗಬಹುದು. ಸ್ವಯಂ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲದಿರುವ, ದಿಕ್ಕು ತೋಚದ ಸ್ಥಿತಿಯಲ್ಲಿ ಇನ್ನೊಬ್ಬರ ಸಹಾಯಕ್ಕಾಗಿ ಕೈಚಾಚಬೇಕು. ಬದುಕಿನ ಪ್ರತಿಯೊಂದು ಸವಾಲುಗಳಿಗೂ ಇನ್ನೊಬ್ಬರನ್ನು ಅವಲಂಬಿಸುವುದು ತಪ್ಪು. ಎಲ್ಲರಿಗೂ ಅವರವರ ಬದುಕಿನ ಸಮಸ್ಯೆಗಳು, ಕರ್ತವ್ಯಗಳು ಇದ್ದೇ ಇರುತ್ತವೆ. ಸುಖ-ದುಃಖಗಳು ವ್ಯಕ್ತಿಕೇಂದ್ರಿತವಾಗಿರುತ್ತವೆ ಎನ್ನುವುದನ್ನು ಮರೆಯಬಾರದು. ವ್ಯಕ್ತಿಯು ಸಮೂಹದಲ್ಲಿ ಒಂದಾಗಿ ಬಾಳುವುದಕ್ಕೆ ಬಯಸುತ್ತಾನೆ. ತಾನು ಯಾರಿಗೋ ಸೇರಿದವನು, ತನಗಾಗಿ ಯಾರೋ ಇದ್ದಾರೆ ಎಂಬ ಭಾವದಲ್ಲಿ ಬಾಳಲು ಇಚ್ಛಿಸುತ್ತಾನೆ.
ಆದರೆ ಬಹಳಷ್ಟು ಮಂದಿ ಯನ್ನು ಒಂಟಿತನ, ಅನಾಥಪ್ರಜ್ಞೆಯು ಕಾಡುತ್ತಿರುತ್ತದೆ. ಈ ಆಂತರಿಕ ಶೂನ್ಯತೆಯನ್ನು ಕಳೆದುಕೊಳ್ಳಲು ಎಲ್ಲರೊಡನೆಯೂ ಅಳಲನ್ನು ತೋಡಿಕೊಳ್ಳುತ್ತಾರೆ. ಆಲಿಸಿದವರು ಅಯ್ಯೋ ಪಾಪ ಎಂದರೆ ಏನನ್ನೋ ಪಡೆದವರಂತೆ ಸಮಾಧಾನಗೊಳ್ಳುತ್ತಾರೆ. ಲೌಕಿಕ ಜೀವಿತದ ಮೋಹ ಭ್ರಮೆಗಳಲ್ಲಿ ಕಳೆದುಹೋದವರು ಹೀಗೆ ಚಡಪಡಿಸುತ್ತಾರೆ, ತಡಕಾಡುತ್ತಾರೆ. ಬದುಕೆಂದರೆ ಹೋರಾಟ. ಏರಿಳಿತಗಳಿಂದ ಕೂಡಿದ ಬಾಳ ಹಾದಿಯಲ್ಲಿ ಏಳುತ್ತಾ ಬೀಳುತ್ತಾ ನಡೆಯುವುದೇ ಜೀವನಿಗೆ ಶಿಕ್ಷಣ. ಕಾಮ, ಕ್ರೋಧ, ಮೋಹಗಳಿಗೆ ಒಳಗಾದವರಿಗೆ ಜೀವನವು ಕಲಿಸುವ ಅನುಭವದ ಪಾಠವು ಅರ್ಥವಾಗಲಾರದು. ಗಣಿತದ ಸೂತ್ರಗಳನ್ನು ಮಗುವೇ ಬಿಡಿಸಿದರಷ್ಟೇ ಅದಕ್ಕೆ ಸರಿಯಾದ ಕಲಿಕೆ, ಇನ್ಯಾರೋ ಬರೆದರೆ, ಪರಿಹರಿಸಿಕೊಳ್ಳಲು ಸ್ವಯಂ ಮುಂದಾಗದೇ ಇದ್ದರೆ ಗಣಿತ ಪಾಠವು ಕಷ್ವೆನ್ನಿಸುವುದು ಸಹಜ. ಜೀವನದ ಲೆಕ್ಕಾಚಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಅದನ್ನು ಬಿಡಿಸಿಕೊಳ್ಳುವ ಹಂತದಲ್ಲಿ ಅನುಭವವು ವಿಸ್ತರಿಸಿದುದು, ವ್ಯಕ್ತಿತ್ವವು ಉನ್ನತವಾದುದನ್ನು ತಿಳಿದುಕೊಳ್ಳಬೇಕು. ಕಷ್ಟವು ವ್ಯಕ್ತಿಯನ್ನು ದೃಢವಾಗಿಸುತ್ತದೆ. ಆತ್ಮೀಯರನ್ನು ಪರಿಚಯಿಸುತ್ತದೆ. ಬದುಕು ಬಂದಂತೆ ಎದುರುಗೊಳ್ಳುವ ಆತ್ಮವಿಶ್ವಾಸವಿದ್ದರೆ ಸಮಸ್ಯೆಗಳೆಲ್ಲವೂ ಅವಕಾಶಗಳಾಗುತ್ತವೆ. ಹಗುರವಾಗಿ ಬಾಳುವುದು ಸಾಧ್ಯವಾಗುತ್ತದೆ.