ಕಗ್ಗದ ಬೆಳಕು: ಬೆದಕಾಟದ ಬದುಕಿನ ಕುದಿತ

kaggada belaku 12 feb 20
Published on
ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು |

ಅದಕಾಗಿ ಇದಕಾಗಿ ಮತ್ತೊಂದಕಾಗಿ ||

ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ |

ಕುದಿಯುತಿಹುದಾವಗಂ - ಮಂಕುತಿಮ್ಮ ||

‘ಬದುಕಿನುದ್ದಕ್ಕೂ ಅದು ಬೇಕು ಇದು ಬೇಕು ಎಂಬ ತಡಕಾಟ, ಕ್ಷಣಕ್ಷಣವೂ ಹೊಸ ಹಸಿವು. ಅಧಿಕಾರ, ಶ್ರೀಮಂತಿಕೆ, ಸೌಂದರ್ಯ ಮತ್ತು ಕೀರ್ತಿಗಳನ್ನು ನೆನೆದು ಮನಸ್ಸು ಸದಾ ಕುದಿಯುತ್ತಿರುತ್ತದೆ’ ಎನ್ನುತ್ತದೆ ಈ ಕಗ್ಗ.

ಹಲವು ಆಕರ್ಷಣೆ, ವೈವಿಧ್ಯಗಳೊಂದಿಗೆ ನೆರೆದ ಬದುಕು ಎಂಬ ಸಂತೆ ಹೊಕ್ಕವನು, ಅಲ್ಲಿನ ಸುಖ-ಸೊಬಗುಗಳಿಗೆ ಮರುಳಾಗಿ ಬಂದ ಉದ್ದೇಶವನ್ನೇ ಮರೆಯುತ್ತಾನೆ. ಸಂತೆಯೊಳಗಿನ ಹಲವು ಬಗೆಯ ಅಂದ-ಚಂದದ ನೋಟ, ಸುಖ-ಭೋಗಗಳಲ್ಲಿ ಮೈಮರೆತು ವಿಹರಿಸುತ್ತಾನೆ. ಬಯಕೆಗಳು ಈಡೇರಿದ ಮೇಲೆ ಅವನೇನೂ ಸಂತೃಪ್ತನಾಗುವುದಿಲ್ಲ. ಇನ್ನೇನು ಹೊಸದಿದೆ ಎಂದು ಬೆದಕಾಡುತ್ತಾನೆ. ಪಡೆದಷ್ಟೂ ಬೇಕೆನಿಸುವ ಚಪಲದಿಂದ ವ್ಯರ್ಥವಾಗಿ ಅಲೆದಾಡುತ್ತಾನೆ. ಆತನೊಂದಿಗೆ ಹಲವರು ಯಾವ್ಯಾವುದೋ ಕಾರಣಕ್ಕೆ ಜತೆಗೂಡುತ್ತಾರೆ, ಪ್ರೀತಿ ತೋರುತ್ತಾರೆ, ಇನ್ಯಾರೋ ಎಳೆದಾಡುತ್ತಾರೆ, ಹಗೆ ಸಾಧಿಸುತ್ತಾರೆ. ನಗು, ಅಳು, ಕೋಪ, ಮುಂತಾದ ಭಾವಗಳನ್ನು ಎದುರಿಸುತ್ತ ಕಾಲ ಕಳೆಯುತ್ತಾನೆ. ಎಷ್ಟೋ ಸಲ ಪರಿಚಿತರು ಅಪರಿಚಿತರಂತೆ ಸರಿದುಹೋಗುತ್ತಾರೆ, ಇನ್ಯಾರೋ ಆತ್ಮೀಯರಾಗುತ್ತಾರೆ. ಕಸಿಯುವ, ಬೆಸೆಯುವ, ಸಹಿಸುವ ಪ್ರಕ್ರಿಯೆಯೊಳಗೆ ಅನಾಥನಂತೆ ತಿರುಗುತ್ತ ಒಂದು ದಿನ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾನೆ.

ಬದುಕು ಹೀಗೆ ಅರ್ಥಹೀನವಾಗಿ ಕೊನೆಯಾಗಲು ಮನುಷ್ಯನ ದುರ್ಬಲ ಮನಃಸ್ಥಿತಿ ಕಾರಣ. ನಿನ್ನೆ-ಇಂದು-ನಾಳೆಗಳೊಳಗೆ ನಡೆವ ಸಮರದಲ್ಲಿ, ನಾಳೆ ಎನ್ನುವ ರಹಸ್ಯವನ್ನು ಮನುಷ್ಯ ಎಂದೂ ಭೇದಿಸಲಾರ. ಆದರೂ ನಾಳೆಯ ಕುರಿತಾದ ಅವನ ಕನಸು-ನಿರೀಕ್ಷೆಗಳಿಗೆ ಮಿತಿಯಿಲ್ಲ. ಸಂತೋಷವನ್ನು ಹುಡುಕುತ್ತ ಆಸೆಗಳ ಬೆನ್ನಟ್ಟುತ್ತಾನೆ. ಆದರೆ ಸಂತೋಷವು ಬಾಹ್ಯಪ್ರಪಂಚದಲ್ಲಿಲ್ಲ ಎನ್ನುವ ಸತ್ಯವನ್ನು ತಿಳಿಯುವುದೇ ಇಲ್ಲ. ಥಳುಕಿನ ಲೋಕದ ಭ್ರಮೆಗಳನ್ನು ಹೊಂದುವುದೇ ಮನುಷ್ಯಜೀವಿತದ ಮುಖ್ಯ ಗುರಿಯಾಗುತ್ತದೆ. ಎಲ್ಲರನ್ನೂ ಆಳಬಲ್ಲ ಅಧಿಕಾರವು ಬೇಕೆನಿಸುತ್ತದೆ. ಎಲ್ಲರಿಂದಲೂ ಮನ್ನಣೆ ಪಡೆಯುವ ಶ್ರೀಮಂತಿಕೆಗಾಗಿ ಹಂಬಲಿಸುತ್ತಾನೆ. ಎಲ್ಲರೂ ಅಸೂಯೆಪಡುವಂಥ ದೇಹಸೌಂದರ್ಯಕ್ಕಾಗಿ, ಪ್ರಶಂಸಿಸಲ್ಪಡುವ ಕೀರ್ತಿಗಾಗಿ ಚಡಪಡಿಸುತ್ತಾನೆ. ಹೀಗೆ ಬಾಹ್ಯ ಆಡಂಬರಗಳೇ ಬದುಕಿನಲ್ಲಿ ಮುಖ್ಯ ಎಂದು ಭಾವಿಸುವವನ ಮನವು ಅತೃಪ್ತಿಯಿಂದ ಕುದಿಯುತ್ತಿರುತ್ತದೆ.

ಅಳು-ನಗು, ಮಾತು-ಮೌನಗಳಿಗೆಲ್ಲ ಕೃತಕತೆಯನ್ನು ಆವಾಹಿಸಿಕೊಂಡು ಒಳಗೊಳಗೆ ಬಿಕ್ಕಳಿಸುತ್ತಾನೆ. ಸಿರಿ-ಸಂಪತ್ತು, ಒಲವು-ಚೆಲುವುಗಳನ್ನು ಕಳೆದುಕೊಳ್ಳುವ ಭಯದಿಂದ ನರಳುತ್ತಾನೆ. ಈ ರೀತಿ ಬೆಡಗಿನ ಬದುಕನ್ನು ಆಯ್ದುಕೊಂಡವರು ಎಲ್ಲರೊಳಗೆ ಬೆರೆಯುತ್ತಾರಾದರೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುತ್ತಾರೆ. ಕಡೆಗಣಿಸಲ್ಪಡುವ, ಅಸ್ತಿತ್ವ ಕಳೆದುಕೊಳ್ಳುವ ದಿಗಿಲಿನಿಂದಾಗಿ ದರ್ಪದಿಂದ ವ್ಯವಹರಿಸುತ್ತಾರೆ. ಸ್ನೇಹ-ಸಂಬಂಧಗಳನ್ನೂ ವ್ಯಾವಹಾರಿಕವಾಗಿ ಅಳೆಯುತ್ತ , ಬಿಗುಮಾನ ತೋರುತ್ತ ಒಂಟಿಯಾಗಿಬಿಡುತ್ತಾರೆ.

ವಿವೇಕಿಯಾದವನು ಹೀಗೆ ಬಾಳುವುದಿಲ್ಲ. ಹಲವು ಬಗೆಗಳಲ್ಲಿ ಅನುಭವಗಳನ್ನು ಪಡೆಯುವ ಸಾಧ್ಯತೆ ಇರುವ, ಅದನ್ನು ಯೋಗ್ಯವಾಗಿ ಬಳಸಲು ಅರಿತಿರುವ ಮನುಷ್ಯನಿಗೆ ಗುರುತರ ಹೊಣೆಗಾರಿಕೆ ಇದೆ. ರಂಜನೀಯ ಜೀವನವನ್ನು ಕಲ್ಪಿಸಿಕೊಂಡು ಭ್ರಮೆಯ ಲೋಕದಲ್ಲಿ ಕಳೆದುಹೋಗುವ ಬದಲು, ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ನೈಜ ಗೆಲುವಿನ ದಾರಿಯನ್ನು ಗುರುತಿಸಬೇಕು. ತನ್ನನ್ನು ಅರಿತುಕೊಂಡವನು ಜೀವನಕ್ಕೆ ಒಂದಿಷ್ಟು ಮೌಲ್ಯಗಳು ಬೇಕೆಂದುಕೊಂಡವನು ಎಂದೂ ಕ್ಷಣಿಕ ಸುಖಗಳನ್ನು ಹಿಂಬಾಲಿಸುವುದಿಲ್ಲ. ಆಂತರ್ಯದಲ್ಲೇ ಸಂತೋಷವನ್ನು ಕಂಡುಕೊಳ್ಳುತ್ತಾನೆ. ತನ್ನೊಳಗಿನ ಆಸೆಗಳಿಗೆ ಗುಲಾಮನಾಗದಿರುವವನ ಜೀವಿತದಲ್ಲಿ ಮಾತ್ರ ಸಂತೃಪ್ತಿ ನೆಲೆಸುತ್ತದೆ. ಸರಳ-ಸಹಜ ನಡವಳಿಕೆ ಮತ್ತು ಜ್ಞಾನದೆಡೆಗಿನ ತುಡಿತ ಇದ್ದರಷ್ಟೇ ವ್ಯಕ್ತಿ ನೆಮ್ಮದಿಯಾಗಿ ಬಾಳುತ್ತಾನೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net