ಕಾಡುಗೊಲ್ಲ ಅಭಿವೃದ್ಧಿ ನಿಗಮ ಹೆಸರು ಬದಲಿಸಿದರೆ ಉಗ್ರಹೋರಾಟ

Kadugolla_PC
Published on

ತುಮಕೂರು: ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗೊಲ್ಲರ ಅಭಿವೃದ್ಧಿ ನಿಗಮವೆಂದು ಬದಲಿಸಲು ಹೊರಟಿದ್ದು ಸರ್ಕಾರ ಇವರ ಲಾಬಿಗೆ ಮಣಿದಿದ್ದೇ ಆದರೆ ರಾಜ್ಯದಾದ್ಯಂತ ಉಗ್ರಹೋರಾಟ ನಡೆಸುವುದಾಗಿ ಜಿಲ್ಲಾ ಕಾಡುಗೊಲ್ಲರ ಸಂಘ ಎಚ್ಚರಿಸಿದೆ.

ಶಿರಾ ಉಪಸಮರ ಸಂದರ್ಭದಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಘೋಷಿಸಿದ್ದು ಬಿಟ್ಟರೆ, ಅಧ್ಯಕ್ಷರ ನೇಮಕ ಹಾಗೂ ಈವರೆಗೆ ಅನುದಾನ ನೀಡಿಲ್ಲ. ಕೂಡಲೇ ಅಧ್ಯಕ್ಷರ ನೇಮಕ ಮಾಡಿ, ಕನಿಷ್ಠ 200 ಕೋಟಿ ರೂ.,ಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾ ಕಾಡುಗೊಲ್ಲ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ಇಂದು ಎಚ್ಚರಿಸಿದರು.

ರಾಜ್ಯದಲ್ಲಿ ಸುಮಾರು 40 ಲಕ್ಷದಷ್ಟು ಜನಸಂಖ್ಯೆಯಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತಂತೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯ ನಮ್ಮದಾಗಿದ್ದು ರಾಜ್ಯದ ಸುಮಾರು 28 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರೆನಿಸಿದ್ದೇವೆ. ಈಗಲಾದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವಂತೆ ಈರಣ್ಣ ಒತ್ತಾಯಿಸಿದರು.

ರಾಜ್ಯ ಸರ್ಕಾರದ ಮುಂದಿನ ನಡೆ,ನುಡಿಗಳ ಕುರಿತು ಸಮಾಲೋಚಿಸುವ ಸಂಬಂಧ ನ.30ರಂದು ಶಿರಾ ನಗರದಲ್ಲಿ ರಾಜ್ಯದ ಎಲ್ಲಾ ತಾಲೂಕುಗಳ ಕಾಡುಗೊಲ್ಲ ಮುಖಂಡರ ಸಭೆಯನ್ನು ಕರೆಯಲಾಗಿದೆ. ಒಂದು ವೇಳೆ ಸರ್ಕಾರವೇನಾದರೂ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಾಯಿಸಿದರೆ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿ ನಿರ್ಣಯಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net