

ಕಡಪ: ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಗುರುವಾರ (ಫೆ.4) ನಡೆದಿದೆ. ಮೃತರನ್ನು ತಾಯಿ ಶ್ರಾವಣಿ (34) ಮತ್ತು ಮಗಳು ಶಾನ್ವಿ (9) ಎಂದು ಗುರುತಿಸಲಾಗಿದೆ.
ಕಡಪ ನಗರದ ಶಂಕರಪುರಂನ ರಾಮಾಲಯಮ್ ಸ್ಟ್ರೀಟ್ ನಿವಾಸಿಯಾದ ಶ್ರಾವಣಿ ಮಗಳ ಜತೆಗೆ ಮನೆಯ ಬೆಡ್ರೂಮ್ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಶವಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಶ್ರಾವಣಿ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದರಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. 10 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಕೆಲ ವರ್ಷಗಳ ಬಳಿಕ ಗಂಡ-ಹೆಂಡತಿ ಸಂಬಂಧದಲ್ಲಿ ಒಡಕು ಮೂಡಿ ಆಗಾಗ ಜಗಳವಾಗುತ್ತಿತ್ತು. ಕಳೆದ ನಾಲ್ಕು ವರ್ಷದಿಂದ ಗಂಡನಿಂದ ದೂರಾಗಿ ಮಗಳೊಂದಿಗೆ ವಾಸವಿದ್ದರು. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಪತಿ ಯುಎಸ್ಎನಲ್ಲಿ ನೆಲೆಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)