ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ...

vidhana soudha 1
Published on

ಬೆಂಗಳೂರು: ಇನ್ನು ಮೂರ್ನಾಲ್ಕು ತಿಂಗಳಲ್ಲಿ ತಾಪಂ ಮತ್ತು ಜಿಪಂ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಸ್ಪರ್ಧಾಕಾಂಕ್ಷಿಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೋಬಳಿಗೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಇದ್ದರೆ, ಈ ಹೋಬಳಿಯಲ್ಲೇ ಮೂರ್ನಾಲ್ಕು ತಾಪಂ ಕ್ಷೇತ್ರಗಳಿವೆ. ಹಾಗಾಗಿ ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಬೆಂಬಲಿತರನ್ನೇ ಗೆಲ್ಲಿಸಲು ಹರಸಾಹಸ ಪಟ್ಟಿರುವ ಆಕಾಂಕ್ಷಿತರು ತಾಪಂ-ಜಿಪಂ ಚುನಾವಣೆ ಅಧಿಸೂಚನೆಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ನಡುವೆ ತಾಲೂಕು ಪಂಚಾಯಿತಿಗಳನ್ನೇ ರದ್ದುಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಆಕಾಂಕ್ಷಿಗಳಿಗೆ ಟೆನ್ಷನ್ ತರಿಸಿದೆ.

ತಾಪಂ ರದ್ದು ಮಾಡುವ ಬಗ್ಗೆ ಈ ಹಿಂದೆಯೂ ಚರ್ಚೆಯಾಗಿತ್ತು. ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಗುರುವಾರ ಇದಕ್ಕೆ ಧ್ವನಿಗೂಡಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ತಾಲೂಕು ಪಂಚಾಯತಿಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. ಇದನ್ನೂ ಓದಿರಿ ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಮಾತನಾಡಿ, ತಾಲೂಕು ಪಂಚಾಯಿತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಪಂ ರದ್ದುಪಡಿಸುವ ಮೂಲಕ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆ ಬದಲು ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.

ಇದಕ್ಕೆ ಉತ್ತರಿಸಿದ ಈಶ್ವರಪ್ಪ, ಜಿಪಂ, ತಾಪಂ ಹಾಗೂ ಗ್ರಾಪಂ ಪೈಕಿ ತಾಲೂಕು ಪಂಚಾಯಿತಿ ಬೇಕಿಲ್ಲ ಎಂಬ ಅಭಿಪ್ರಾಯ ಹಲವರಲ್ಲಿದೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ತಾಪಂಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ 3 ಹಂತಗಳ ಪಂಚಾಯಿತಿ ವ್ಯವಸ್ಥೆ ಬದಲು ಎರಡು ಹಂತಗಳ ಪಂಚಾಯಿತಿಯನ್ನು ಜಾರಿಗೆ ತರಬೇಕು ಎಂಬ ಭಾವನೆ ಬಹುತೇಕರಲ್ಲಿದೆ ಎಂದರು. ಅಲ್ಲದೆ ತಾಪಂಗಳಲ್ಲಿ ಪರಿಣಾಮಕಾರಿ ಕೆಲಸ ಮಾಡೋಕೆ ಆಗಲ್ಲ ಎಂದು ಈ ಬಾರಿ ಹಲವರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದರು ಎಂದರು.

ಜಿಪಂ, ತಾಪಂ ಹಾಗೂ ಗ್ರಾಪಂ ಕೇಂದ್ರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದವು. ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಎರಡು ಹಂತಗಳಿಗೆ ಇಳಿಸುವ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ದೇಶದ ಬಹುತೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ವ್ಯವಸ್ಥೆ. ಯಾವ ರಾಜ್ಯ 20 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿದೆಯೋ ಆ ರಾಜ್ಯಗಳಿಗೆ ಮಾತ್ರ ಇದರಿಂದ ವಿನಾಯಿತಿ ಇದೆ. ಈ ಕುರಿತು ಶಾಸಕರು ಮತ್ತಷ್ಟು ಅಭಿಪ್ರಾಯವನ್ನು ನೀಡಿದರೆ ಸರ್ಕಾರ ಮುಂದಿನ ಹೆಜ್ಜೆ ಇಡಲು ಅನುಕೂಲವಾಗುತ್ತೆ. ತಾಪಂ ರದ್ದುಗೊಳಿಸಿ ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net