

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ, ತರುಣ್ ಸುದೀರ್ ನಿರ್ದೇಶನದ ಬಹುನಿರೀಕ್ಷಿತ 'ಕಾಟೇರ' ಕಳೆದ ವರ್ಷ ಡಿ.29 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಇದೀಗ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುವಲ್ಲಿ ಯಶಸ್ವಿಯಾಗಿದೆ. ಇಂದಿಗೂ ಸಿನಿಪ್ರೇಕ್ಷಕರಿಂದ ತುಂಬುತ್ತಿರುವ ಚಿತ್ರಮಂದಿರಗಳಲ್ಲಿ ಸಿನಿಮಾಗೆ ವ್ಯಾಪಕ ಪಾಸಿಟಿವ್ ಪ್ರತಿಕ್ರಿಯೆಗಳು ಲಭಿಸುತ್ತಿದ್ದು, ಚಿತ್ರವು ಇದೀಗ 150 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮತ್ತು ಸ್ಯಾಂಡಲ್ವುಡ್ನ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಮುಖ್ಯಭೂಮಿಕೆಯಲ್ಲಿರುವ ಕಾಟೇರ ಚಿತ್ರವು ರಿಲೀಸ್ಗೂ ಮುನ್ನವೇ ಸಾಂಗ್ ಹಾಗೂ ಟ್ರೇಲರ್ ಮೂಲಕವೇ ಭಾರೀ ಸದ್ದು ಮಾಡಿತ್ತು. ಇದೀಗ ಬಿಡುಗಡೆಯ ನಂತರ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ದರ್ಶನ್ ಚಿತ್ರ 7ನೇ ದಿನಕ್ಕೆ 100 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಕಲೆಕ್ಟ್ ಮಾಡಿದೆ.
ಈ ಮೂಲಕ ಕಾಟೇರ ಚಿತ್ರವು 150 ಕೋಟಿ ರೂ.ನತ್ತ ಸಾಗುತ್ತಿದ್ದು, ಶೀಘ್ರವೇ 200 ಕೋಟಿ ಕ್ಲಬ್ ಸೇರಲಿದೆ. ಸದ್ಯ ಈ ಸುದ್ದಿ ತಿಳಿದ ದರ್ಶನ್ ಅಭಿಮಾನಿಗಳು ಭಾರೀ ಸಂತಸ ಪಟ್ಟಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುತ್ತ ಸಂಭ್ರಮಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್, ಆರಾಧನಾ ರಾಮ್, ಬಿರಾದಾರ್, ಜಗಪತಿ ಬಾಬು, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).