

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಬಹು ನಿರೀಕ್ಷಿತ ಕಾಟೇರ ಚಿತ್ರವು ಕಳೆದ ವರ್ಷಾಂತ್ಯ ಡಿಸೆಂಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡದುಕೊಳ್ಳುವಲ್ಲಿ ಚಿತ್ರ ಮುಂಚೂಣಿಯಲ್ಲಿದೆ.
2023ರ ವರ್ಷಾಂತ್ಯದಲ್ಲಿ ಬಿಡುಗಡೆಯಾದ ಚಿತ್ರವು ಈವರೆಗೂ 206ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ತಿಳಿದು ಬಂದಿದೆ. ವಾರದ ದಿನಗಳಲ್ಲೂ ಚಿತ್ರ ಉತ್ತಮ ಗಳಿಕೆ ಕಂಡಿದ್ದು, ಬಿಡುಗಡೆಯಾದ ಮೂರು ವಾರಗಳಲ್ಲಿ ಕಾಟೇರ ಈ ಸಾಧನೆ ಮಾಡಿದ್ದು, ದರ್ಶನ್ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಕನ್ನಡದಲ್ಲಿ ಬಿಡುಗಡೆಯಾದ ಕಾಟೇರ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿ 200 ಕೋಟಿ ಕ್ಲಬ್ ಸೇರಿರುವುದು ವಿಶೇಷವಾಗಿದೆ. ಈ ಚಿತ್ರದ ಮೂಲಕ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ದೊಡ್ಡ ಗೆಲುವು ಕಂಡಿದ್ದಾರೆ. ಇನ್ನಷ್ಟು ದಿನ ಕಾಟೇರ ಅಬ್ಬರಿಸಲಿದ್ದು, ಮುಂದಿನ ದಿನಗಳಲ್ಲಿ 300 ಕೋಟಿ ಕ್ಲಬ್ ಸೇರಬಹುದು ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.
ಈವರೆಗೆ ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟವಾಗಿದ್ದು, ಹೊಸ ವರ್ಷ, ಸಂಕ್ರಾಂತಿ ಸಂದರ್ಭದಲ್ಲಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಇದ್ದಿದ್ದು ಚಿತ್ರಕ್ಕೆ ಸಹಕಾರಿ ಆಗಿದೆ. ಈಗಲೂ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಲಾಭದಾಯಕವಾಗಿದೆ.
ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್ವುಡ್ಗೆ ಪಾದರ್ಪಣೆ ಮಾಡುತ್ತಿದ್ದು, ಚಿತ್ರದಲ್ಲಿ ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.