ಶತಕೋಟಿ ಕ್ಲಬ್​ ಸೇರಿದ ಕಾಟೇರ; ಮಾರಾಟವಾದ ಟಿಕೆಟ್​ ಎಷ್ಟು ಗೊತ್ತಾ?

kaatera
Published on

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ, ತರುಣ್​ ಸುಧೀರ್​ ನಿರ್ದೇಶನದ ಬಹು ನಿರೀಕ್ಷಿತ ಕಾಟೇರ ಚಿತ್ರವು ಡಿಸೆಂಬರ್​ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡದುಕೊಳ್ಳುವಲ್ಲಿ ಚಿತ್ರ ಮುಂಚೂಣಿಯಲ್ಲಿದೆ.

2023ರ ಕೊನೆಯಲ್ಲಿ ಬಿಡುಗಡೆಯಾದ ಚಿತ್ರವು ಈವರೆಗೂ 104.58 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ತಿಳಿದು ಬಂದಿದೆ. ವಾರದ ದಿನಗಳಲ್ಲೂ ಚಿತ್ರ ಉತ್ತಮ ಗಳಿಕೆ ಕಂಡಿದ್ದು, ಬಿಡುಗಡೆಯಾದ ಒಂದೇ ವಾರದಲ್ಲಿ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ಮತ್ತಷ್ಟು ವಿಶೇಷವೆನ್ನಿಸಿದೆ.

ಚಿತ್ರತಂಡದವರು ಹೇಳಿರುವ ಪ್ರಕಾರ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂಪಾಯಿ ಬಾಚಿಕೊಂಡಿದೆ. ಕನ್ನಡದಲ್ಲಿ ರಿಲೀಸ್ ಆಗಿ ಕಾಟೇರ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ನಮ್ಮೆಲ್ಲರ ಖುಷಿ ಹೆಚ್ಚಿಸಿದೆ. ಟಾಲಿವುಡ್ ಹಾಗೂ ಕಾಲಿವುಡ್​ನಲ್ಲೂ ಕಾಟೇರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲಿಂದಲೂ ಸಿನಿಮಾಗೆ ಬೇಡಿಕೆ ಬರುತ್ತಿದ್ದು, ಡಬ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಚಿತ್ರತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಏಳು ದಿನಕ್ಕೆ ಕಾಟೇರ ಚಿತ್ರದ 52.77 ಲಕ್ಷ ಟಿಕೆಟ್ ಮಾರಾಟ ಆಗಿದ್ದು, ಕಳೆದ ಏಳು ದಿನಗಳಲ್ಲಿ 10,961 ಪ್ರದರ್ಶನಗಳು ಕಂಡಿವೆ. ಈ ಪೈಕಿ 6,117 ಶೋಗಳು ಹೌಸ್​ಫುಲ್​ ಆಗಿವೆ ಎಂದು ತಿಳಿದು ಬಂದಿದೆ. ಡಿಸೆಂಬರ್ 29 (19.79), ಡಿಸೆಂಬರ್ 30 (17.35), ಡಿಸೆಂಬರ್ 31 (20.94), ಜನವರಿ 01 (18.26), ಜನವರಿ 02 (09.24), ಜನವರಿ 03 (09.78), ಜನವರಿ 04 (09.52) ಕೋಟಿ ರೂಪಾಯಿ ಕಮಾಯಿ ಮಾಡಿದೆ.

ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್​ ಸ್ಯಾಂಡಲ್​ವುಡ್​ಗೆ ಪಾದರ್ಪಣೆ ಮಾಡುತ್ತಿದ್ದು, ಚಿತ್ರದಲ್ಲಿ ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್​ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net