More

    ಕ್ರಿಕೆಟ್​ ದಿಗ್ಗಜ ಸಚಿನ್​​ ದಾಖಲೆ ಸರಿಗಟ್ಟಿದ 12 ವರ್ಷದ ಪೋರ

    ಬಿಹಾರ: 2023-24ನೇ ಸಾಲಿನ ರಣಜಿ ಟ್ರೋಫಿ ಇಂದಿನಿಂದ (ಜನವರಿ 05) ಆರಂಭವಾಗಿದ್ದು, ಈ ಬಾರಿ 38 ತಂಡಗಳು ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಮುಂಬೈ ಹಾಗೂ ಬಿಹಾರ ತಂಡಗಳು ಉದ್ಘಾಟನಾ ಪಂದ್ಯವನ್ನು ಆಡಲಿವೆ.

    ಮುಂಬೈ ವಿರುದ್ಧದ ಪಂದ್ಯದ ಮೂಲಕ ಬಿಹಾರ ಮೂಲದ 12 ವರ್ಷದ ಪೋರ ವೈಭವ್​ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುತ್ತಿದ್ದು, ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ದಾಖಲೆಗಳ ಪ್ರಕಾರ ವೈಭವ್ ಸೂರ್ಯವಂಶಿ ಅವರ ವಯಸ್ಸು 12 ವರ್ಷ 284 ದಿನಗಳು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ 5ನೇ ಯುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    1942-43ರ ರಣಜಿ ಸೀಸನ್​ನಲ್ಲಿ ಕೇವಲ 12 ವರ್ಷ ಮತ್ತು 73 ದಿನಗಳಲ್ಲಿ ರಜಪೂತಾನ ತಂಡದ ಪರ ಚೊಚ್ಚಲ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದ ಅಲಿಮುದ್ದೀನ್ ಅವರ ಹೆಸರಿನಲ್ಲಿ ಭಾರತದ ಪರ ಅತಿ ಚಿಕ್ಕ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಕೂಡ 15ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು.

    ಇದನ್ನೂ ಓದಿ: ಮೈದಾನದಲ್ಲಿ ರಾಮನಂತೆ ಫೋಸ್​ ನೀಡಿ ಕೈ ಮುಗಿದ ವಿರಾಟ್​ ಕೊಹ್ಲಿ; ವಿಡಿಯೋ ವೈರಲ್​

    ಪ್ರಸ್ತುತ ಬಿಹಾರ ತಂಡದ ಪರ ರಣಜಿಗೆ ಪಾದಾರ್ಪಣೆ ಮಾಡಿರುವ ವೈಭವ್​ ಸೂರ್ಯವಂಶಿ ಭಾರತ ಅಂಡರ್​-19 ಬಿ ತಂಡದ ಭಾಗವಾಗಿದ್ದಾರೆ. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದೊಂದಿಗಿನ ಚತುರ್ಭುಜ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 177 ರನ್ ಕಲೆಹಾಕಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ 2023ರಲ್ಲಿ ನಡೆದ ವಿನೂ ಮಂಕಡ್ ಟ್ರೋಫಿಯಲ್ಲೂ ಆಡಿದ್ದಾರೆ. ಇದರಲ್ಲಿ 393 ರನ್​ ಗಳಿಸಿದ್ದಾರೆ. ವೈಭವ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ನಿಧಾನಗತಿಯ ಸ್ಪಿನ್ ಬೌಲರ್ ಕೂಡ ಆಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ವೈಭವ್​ ತಂದೆ ಸಂಜೀವ್​, ಕಳೆದ ವರ್ಷ ಆರು ಪ್ರಮುಖ ಟೂರ್ನಿಗಳಲ್ಲಿ ನನ್ನ ಮಗ ಭಾಗವಹಿಸಿದ್ದಾನೆ. ಅಜಿಂಕ್ಯ ರಹಾನೆ, ಶಿವಂ ದುಬೆ ಮತ್ತು ಧವಲ್ ಕುಲಕರ್ಣಿ ಅವರಂತಹ ಆಟಗಾರರ ವಿರುದ್ಧ ನನ್ನ ಮಗ ಆಟವಾಡುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಆತ ಹೆಚ್ಚು ರನ್ ಗಳಿಸುತ್ತಾನೆ ಎಂಬ ವಿಶ್ವಾಸ ನನಗಿದ್ದು, ಮುಂದಿನ ದಿನಗಳಲ್ಲಿ ಭಾರತ ತಂಡಕ್ಕೆ ಆಡಲಿದ್ದಾನೆ ಎಂದು ವೈಭವ್​ ತಂದೆ ಸಂಜೀವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts