

ಕೇಪ್ಟೌನ್: ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಎರಡನೇ ಹಾಗೂ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಗೆದ್ದು ಬೀಗಿರುವ ಟೀಂ ಇಂಡಿಯಾ 2024ರಲ್ಲಿ ಶುಭಾರಂಭ ಕಂಡಿದೆ.
ಇನ್ನು ಪಂದ್ಯದ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಡೀನ್ ಎಲ್ಗರ್ಗೆ ವಿರಾಟ್ ಕೊಹ್ಲಿ ಗೌರವ ಸೂಚಿಸುವ ವಿಡಿಯೋ ಒಂದು ವೈರಲ್ ಆಗಿತ್ತು. ಅದೇ ರೀತಿ ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಅತಿಥೇಯ ದಕ್ಷಿಣ ಆಫ್ರಿಕಾ ತಂಡ 34 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್ ಮಾಡಲು ಕ್ರೀಸ್ನತ್ತ ಸ್ಪಿನ್ನರ್ ಕೇಶವ್ ಮಹಾರಾಜ್ ಬರುತ್ತಿದ್ದರು. ಈ ವೇಳೆ ರಾಮ್ ರಾಮ್ ಸಿಯಾ ರಾಮ್ ಎಂಬ ಹಾಡಿನೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಭಾರತ ಮೂಲದವರಾದ ಕೇಶವ್ ಮಹಾರಾಜ್ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸುತ್ತಿದ್ಧಾರೆ. ಹನುಮಂತನ ಭಕ್ತರಾಗಿರುವ ಇವರು ಬ್ಯಾಟ್ ಮೇಲೆ ಓಂ ಎಂದು ಬರೆದುಕೊಂಡಿದ್ದಾರೆ. ಅನೇಕ ಬಾರಿ ಅವರು ತಮ್ಮ ಪೋಸ್ಟ್‌ಗಳಲ್ಲಿ 'ಜೈ ಶ್ರೀ ರಾಮ್' ಎಂದು ಬರೆಯುವ ಮೂಲಕ ಸುದ್ದಿಯಾಗಿದ್ದಾರೆ.