

ಸಾಗರ: ನನ್ನ ಸ್ಪರ್ಧೆ ಖಚಿತ. ಪ್ರಸ್ತುತ ಸನ್ನಿವೇಶದಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಜಯಗಳಿಸುವ ವಾತಾವರಣ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಗಲ್‌ನ ಚೌಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ನಂತರ ವಿವಿಧ ಮುಖಂಡರನ್ನು ಭೇಟಿಯಾಗಿ ಸಾಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಪಕ್ಷಾತೀತವಾಗಿ ನನ್ನ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಅಮಿತ್ ಷಾ ಅವರೇ ಇನ್ನು ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಬೇಡಿ ಎಂದು ಪಕ್ಷದ ಪ್ರಮುಖರಿಗೆ ಸೂಚಿಸಿರುವುದು ನನಗೆ ಸಂತೋಷ ತಂದಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾದಾಗ ಸಾಕಷ್ಟು ಪ್ರಮುಖರು ನನ್ನನ್ನು ಭೇಟಿಯಾಗಿ ಕಣದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದರು. ನಾನು ಯಾರ ಒತ್ತಡಕ್ಕೂ ಮಣಿಯಲಿಲ್ಲ. ಚುನಾವಣೆ ಗೆಲುವಿಗಾಗಿ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಪ್ರಚಾರಕ್ಕೆ ಹೋದಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಾರಿ ನನ್ನನ್ನು ಗೆಲ್ಲಿಸಬೇಕೆಂದು ಜನರು ತೀರ್ಮಾನಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ಶುದ್ಧೀಕರಣಕ್ಕಾಗಿ ನನ್ನ ಗೆಲುವು ಅಗತ್ಯ. ನರೇಂದ್ರ ಮೋದಿ ಜಿಲ್ಲೆಗೆ ನೀಡಿದ ಕೊಡುಗೆ ಅಪಾರ. ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಕೇಂದ್ರದಿಂದ ತರಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.
ಪ್ರಮುಖರಾದ ಎಸ್.ವಿ.ಕೃಷ್ಣಮೂರ್ತಿ, ಎಸ್.ಎಲ್.ಮಂಜುನಾಥ್, ಪ್ರಕಾಶ್ ಕುಂಠೆ, ಗಣೇಶ್, ಸತೀಶ್ ಗೌಡ ಅದರಂತೆ ಇತರರಿದ್ದರು.