ಜಸ್​ರಾಜ್ ಸಂಗೀತವೆಂದರೆ ಅಧ್ಯಾತ್ಮದ ಮಧುರಯಾನ

Sangeeta
Published on

ಭಾರತೀಯ ಸಂಗೀತಲೋಕದ ದಿಗ್ಗಜ ಪ್ರತಿಭೆ, ಪ್ರಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ಜಸ್​ರಾಜ್ (90) ಅಮೆರಿಕದ ನ್ಯೂಜೆರ್ಸಿಯಲ್ಲಿ ಸೋಮವಾರ ನಿಧನರಾದರು. ‘ದಶಕಗಳ ಕಾಲ ಸಂಗೀತ ಸಾಧನೆ ಮಾಡಿದ್ದ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದರು’ ಎಂದು ಅವರ ಪುತ್ರಿ ದುರ್ಗಾ ತಿಳಿಸಿದ್ದಾರೆ. ಮೇವಾಟಿ ಘರಾಣೆಯ ಕಲಾವಿದರಾಗಿದ್ದ ಜಸ್​ರಾಜ್ ಲಾಕ್​ಡೌನ್ ವೇಳೆ ಅಮೆರಿಕದಲ್ಲಿದ್ದರು. ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು, ಸಂಗೀತಲೋಕದ ಸಾಧಕರು ಕಂಬನಿ ಮಿಡಿದಿದ್ದಾರೆ.

ಸಂಗೀತ ಮಾರ್ತಾಂಡ ಪಂಡಿತ್ ಜಸ್​ರಾಜ್ ಸಮಕಾಲೀನ ಸಂಗೀತಲೋಕದ ಶ್ರೇಷ್ಠರ ಮೊದಲ ಸಾಲಿನಲ್ಲಿದ್ದವರು. ಜಸ್​ರಾಜ್ ಸಂಗೀತವೆಂದರೆ ಕೇಳುಗರ ಪಾಲಿಗೆ ಭಕ್ತಿ ಮತ್ತು ಅಧ್ಯಾತ್ಮದ ಮಧುರ ಯಾನ. ಅದು ಮೇವಾಟಿ ಘರಾಣಾದ ಸೂಕ್ಷ್ಮ ಕುಸುರಿ, ಸ್ವರಗಳ ಮೇಲಿನ ಸರಾಗ ಸಂಚಾರ, ತಾನ್​ಗಳ ವೈಶಿಷ್ಟ್ಯ ಮೊದಲಾದ ಸಂಗೀತ ಸೌಂದರ್ಯಗಳ ಮೊತ್ತ. ಅತ್ಯಂತ ಗಂಭೀರ, ಮಧುರ, ಸುಂದರ ಮತ್ತು ಸರಾಗವಾಗಿ ಮಂದ್ರ ಷಡ್ಜದಿಂದ ಅತಿ ತಾರ ಷಡ್ಜದವರೆಗೆ ಮಿಂಚಿನ ವೇಗದಲ್ಲಿ ಚಲಿಸುವ ಶಾರೀರ ಅವರದು. ಓಂ ನಮೋ ಭಗವತೇ ವಾಸುದೇವಾಯ ಎಂದೋ, ಓಂ ಶ್ರೀ ಅನಂತ ಹರಿ ನಾರಾಯಣ ಎಂದೋ ಅವರು ಹಾಡತೊಡಗಿದರೆ ಅಲ್ಲೊಂದು ಧ್ಯಾನಮಂದಿರದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸ್ವರ, ಸಾಹಿತ್ಯದಲ್ಲಿ ಲೀನವಾಗಿ ಶೋತೃವರ್ಗವನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತಿತ್ತು.

ಸಂಗೀತ ಕಛೇರಿಗೊಂದು ಕಾದಂಬರಿಯ ಸ್ವರೂಪ ಕೊಟ್ಟವರು ಅವರೆಂದರೆ ತಪ್ಪಲ್ಲ. ಪಂಡಿತ್ ಭೀಮಸೇನ್ ಜೋಶಿ, ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಮೊದಲಾದವರೊಂದಿಗಿನ ಅವರ ಜುಗಲ್​ಬಂದಿ ಅಂಥದೊಂದು ಅನುಭವ ನೀಡುತ್ತದೆ. ಏಕಕಾಲಕ್ಕೆ ಗಾಯಕ ಹಾಗೂ ಗಾಯಕಿ ಬೇರೆ ಬೇರೆ ರಾಗಗಳನ್ನು ಒಟ್ಟಿಗೆ ಪ್ರಸ್ತುತಪಡಿಸುವ ಅವರ ಪ್ರಯೋಗ ಕೂಡ ಹಾಗೆಯೇ. ಅದೀಗ ‘ಜಸ್​ರಂಗಿ’ ಎಂದೇ ಪ್ರಸಿದ್ಧ.

ಹರಿಯಾಣದ ಹಿಸ್ಸಾರ್ ಜಿಲ್ಲೆಯ ಮಾಡೊರಿಯಲ್ಲಿ 1930ರ ಜ. 28ರಂದು ಜಸ್​ರಾಜ್ ತಂಬೂರಿ ನಾದ ಕೇಳುತ್ತಲೇ ಜನಿಸಿದವರು. ಅವರ ತಂದೆ ಮೇವಾಟಿ ಘರಾಣೆಯ ಗಾಯಕ ಪಂಡಿತ್ ಮೋತಿರಾಮ್ ಸಹೋದರ ಮಣಿರಾಮ್ ಕೂಡ ಕಲಾವಿದ. ಜಸ್​ರಾಜ್ ಆರಂಭದಲ್ಲಿ ತಬಲಾ ಕಲಿತರು. ಒಮ್ಮೆ ರಾಗದ ಸ್ವರಸಂಚಾರದ ಬಗ್ಗೆ ಇವರು ನೀಡಿದ ಸಲಹೆ ಕೇಳಿದ ಗಾಯಕರೊಬ್ಬರು ‘ನೀನು ತಬಲ ನುಡಿಸುವವ, ನಿನಗೆ ಗಾಯನವೇನು ಗೊತ್ತು?’ ಎಂದು ಮೂದಲಿಸಿದರಂತೆ. ಅದು ಆಗಷ್ಟೇ 14ರ ಹರೆಯದಲ್ಲಿದ್ದ ಜಸ್​ರಾಜ್​ರನ್ನು ಕೆರಳಿಸಿತು. ತಾನು ಗಾಯನ ಕಲಿಯದ ಹೊರತೂ ತಲೆಗೂದಲು ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಗಾಯನದ ತಾಲೀಮು ಶುರುವಾಯಿತು. ಆಕಾಶವಾಣಿಯಲ್ಲಿ ತಮ್ಮ ಗಾಯನ ಪ್ರಸಾರವಾದ ನಂತರವೇ ಕೂದಲು ತೆಗೆದರಂತೆ. ಇಂಥ ಹಠವಾದಿಯಾದ್ದರಿಂದಲೇ ಬಹುಶಃ ಅವರು ಸುಮಾರು ಏಳು ದಶಕಗಳ ಕಾಲ ಸಂಗೀತಲೋಕದ ಉನ್ನತರ ಸಾಲಿನಲ್ಲಿ ನಿಂತರು. ನಿರಂತರ ಪ್ರಯತ್ನ, ಪರಿಶ್ರಮ, ತಾಲೀಮು, ಚಿಂತನೆಯಿಂದ ಅವರು ಸಂಗೀತದ ಆಧ್ಯಾತ್ಮಿಕ ಆಯಾಮಕ್ಕೆ ಹೊಸ ಭಾಷ್ಯವನ್ನೇ ಬರೆದುದು ಈಗ ಇತಿಹಾಸ. ಮೂರೂ ಪದ್ಮ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅಲ್ಲದೆ ಅಸಂಖ್ಯ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ. ಇದನ್ನೂ ಓದಿ: ಬೆಂಗಳೂರು, ಮೈಸೂರಿನಿಂದ ಕೇರಳಕ್ಕೆ ಓಣಂ ಸ್ಪೆಶಲ್​ ಬಸ್​ ಸಂಚಾರ

ಅವರು ರಾಗವನ್ನು ವಿಸ್ತರಿಸುವ ರೀತಿ, ತಾನ್​ಗಳಿಗೆ ಮಾಧುರ್ಯ ತುಂಬುವ ಪರಿ ವಿಶಿಷ್ಟವಾದುದು. ಅಡಾಣಾ ರಾಗದ ‘ಮಾತಾ ಕಾಲಿಕಾ’ ರಚನೆಯಾಗಲೀ, ಠುಮ್ರಿಯಾಗಲಿ, ಮೀರಾ ಭಜನೆಯಾಗಲಿ ಅವರ ಪ್ರಸ್ತುತಿಯಲ್ಲಿ ಸ್ವಂತಿಕೆಯ ಹೊಳಪು ಹಾಗೂ ಛಾಪು ಇದ್ದೇ ಇದೆ. ನ್ಯೂಯಾರ್ಕ್, ನ್ಯೂಜೆರ್ಸಿ, ಫ್ಲಾರಿಡಾ ಮುಂತಾದ ನಗರಗಳಲ್ಲಿ ಸ್ಕೂಲ್ ಆಫ್ ಮ್ಯೂಸಿಕ್ ಸ್ಥಾಪಿಸಿ ಹೊರದೇಶಗಳಲ್ಲಿ ಭಾರತೀಯ ಸಂಗೀತದ ಪ್ರಚಾರವನ್ನೂ ಅವರು ನಡೆಸಿದ್ದಾರೆ. ಸರ್ಪ¤ ಚಕ್ರವರ್ತಿ, ಸಂಜೀವ್ ಅಭ್ಯಂಕರ್, ಕಲಾ ರಾಮನಾಥ್, ಅನುರಾಧಾ ಪೋಡ್ವಾಲ್, ಸಾಧನಾ ಸರಗಮ್ ಇಂಥ ಪ್ರಸಿದ್ಧರು ಅವರ ಗರಡಿಯಲ್ಲಿ ಪಳಗಿದವರು. ಜಸ್​ರಾಜ್ ಪತ್ನಿ ಪ್ರಸಿದ್ಧ ನಿರ್ದೇಶಕ ವಿ. ಶಾಂತಾರಾಂ ಅವರ ಪುತ್ರಿ ಮಧುರಾ. ಪುತ್ರ ಸಾರಂಗದೇವ ಪಂಡಿತ್ ಹಾಗೂ ಪುತ್ರಿ ದುರ್ಗಾ ಜಸ್​ರಾಜ್.

ಗ್ರಹಕ್ಕೆ ಜಸ್​ರಾಜ್ ಹೆಸರು

ಗುರು ಹಾಗೂ ಮಂಗಳಗ್ರಹಗಳ ನಡುವೆ ಪತ್ತೆ ಮಾಡಲಾದ ಚಿಕ್ಕ ಗ್ರಹವೊಂದಕ್ಕೆ ಜಸ್​ರಾಜ್ ಹೆಸರನ್ನು ಇಡಲಾಗಿದೆ. 2006ರ ನವೆಂಬರ್ 11ರಂದು ಪತ್ತೆ ಮಾಡಲಾದ ಈ ಗ್ರಹಕ್ಕೆ ಆಗ ‘2006ವಿಪಿ32’ ಎಂದು ಕರೆಯಲಾಗಿತ್ತು. ಜಸ್​ರಾಜ್ ಜನ್ಮದಿನಾಂಕವನ್ನು (28-01-30) ತಿರುಗಿಸಿ ಬರೆದಾಗ 300128 ಎಂದಾಗುವ ಕಾರಣ, ಅವರ ಹೆಸರನ್ನೇ ಈ ಗ್ರಹಕ್ಕೆ ಇರಿಸಲಾಗಿದೆ. ಇದನ್ನೂ ಓದಿ: ಲಿವರ್​ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನಿರ್ದೇಶಕ ನಿಶಿಕಾಂತ್ ಕಾಮತ್​ ನಿಧನ

ಹುಬ್ಬಳ್ಳಿಗೆ ಬಂದಿದ್ದರು

ಜಸ್​ರಾಜ್ 2016ರಲ್ಲಿ ಹುಬ್ಬಳ್ಳಿಗೆ ಬಂದಿದ್ದರು. ದಿ. ಗಂಗೂಬಾಯಿ ಹಾನಗಲ್ ಸ್ಮರಣಾರ್ಥ ಪುರಸ್ಕಾರವನ್ನು ಅವರಿಗೆ ನೀಡಲಾಗಿತ್ತು. ‘ಗಂಗೂಬಾಯಿ ನನಗೆ ತಾಯಿ ಇದ್ದಂತೆ. ತಾಯಿ ಹೆಸರಿನ ಪುರಸ್ಕಾರ ಸಿಕ್ಕಿದ್ದು ನನ್ನ ಪುಣ್ಯ’ ಎಂದು ಅವರು ಬಣ್ಣಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net