ಜೂನಿಯರ್​ ಮಹಿಳಾ ಏಷ್ಯಾಕಪ್​ ಹಾಕಿ: ಭಾರತಕ್ಕೆ ಇಂದು ಬಾಂಗ್ಲಾ ಸವಾಲು

web hockey
Published on

ಮಸ್ಕತ್​: ಹಾಲಿ ಚಾಂಪಿಯನ್​ ಭಾರತ ತಂಡ 9ನೇ ಆವೃತ್ತಿಯ ಜೂನಿಯರ್​ ಮಹಿಳೆಯರ ಏಷ್ಯಾಕಪ್​ ಹಾಕಿ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದ್ದು, ಶುಭಾರಂಭ ಕಾಣುವ ತವಕದಲ್ಲಿದೆ. 10 ತಂಡಗಳ ಟೂರ್ನಿಯಲ್ಲಿ ಅಗ್ರ 5 ತಂಡಗಳು ಮುಂದಿನ ವರ್ಷದ ಜೂ. ಮಹಿಳಾ ವಿಶ್ವಕಪ್​ಗೆ ಅರ್ಹತೆ ಪಡೆಯಲಿದ್ದು, ಭಾರತವೂ ಈ ಅವಕಾಶವನ್ನು ಬಾಚಿಕೊಳ್ಳಬೇಕಾಗಿದೆ.

ಜ್ಯೋತಿ ಸಿಂಗ್​ ನೇತೃತ್ವದ ಭಾರತ ತಂಡ ದೀಪಿಕಾ, ವೈಷ್ಣವಿ ವಿಟ್ಟಲ್​ ಫಾಲ್ಕೆ, ಸುನೆಲಿಟ ಟೊಪ್ಪೊ, ಮುಮ್ತಾಜ್​ ಖಾನ್​ರಂಥ ಸೀನಿಯರ್​ ತಂಡದಲ್ಲೂ ಆಡಿರುವ ಆಟಗಾರ್ತಿಯರನ್ನು ಒಳಗೊಂಡಿದೆ. ಶನಿವಾರವೇ ಆರಂಭಗೊಂಡಿರುವ ಟೂರ್ನಿಯಲ್ಲಿ ಭಾರತ ಎ ಗುಂಪಿನಲ್ಲಿದ್ದು, ಬಾಂಗ್ಲಾ ಜತೆಗೆ ಚೀನಾ (ಡಿ.11), ಮಲೇಷ್ಯಾ (ಡಿ.9), ಥಾಯ್ಲೆಂಡ್​ (ಡಿ.12) ತಂಡಗಳೂ ಇವೆ. ಬಿ ಗುಂಪಿನಲ್ಲಿ ಹಾಂಕಾಂಗ್​, ಜಪಾನ್​, ದಣ ಕೊರಿಯಾ, ಶ್ರೀಲಂಕಾ ಮತ್ತು ಚೀನಾ ತೈಪೆ ತಂಡಗಳಿವೆ.

ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಜತೆಗೆ ಜೂ. ವಿಶ್ವಕಪ್​ಗೂ ಅರ್ಹತೆ ಗಳಿಸಲಿವೆ. ಡಿ.14ಕ್ಕೆ ಸೆಮೀಸ್​ ಮತ್ತು ಡಿ. 15ಕ್ಕೆ ಫೈನಲ್​ ಪಂದ್ಯ ನಡೆಯಲಿದೆ.

ಆರಂಭ: ರಾತ್ರಿ 8.30, ನೇರಪ್ರಸಾರ: ಹಾಕಿ ಇಂಡಿಯಾ ಆ್ಯಪ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net