

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಇದೀಗ ಅಪ್ಪನ ಎನ್ಜಿಒ ಸಂಸ್ಥೆಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಸಚಿನ್ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.
ಲಾಭರಹಿತ ಸಚಿನ್ ತೆಂಡುಲ್ಕರ್ ಫೌಂಡೇಷನ್ನಲ್ಲಿ 27 ವರ್ಷದ ಸಾರಾ ನಿರ್ದೇಶಕಿ ಆಗಿ ನೇಮಕಗೊಂಡಿದ್ದಾರೆ. ಸಾರಾ ಲಂಡನ್ನ ಯುನಿವರ್ಸಿಟಿ ಕಾಲೇಜಿನಲ್ಲಿ ಕ್ಲಿನಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಪೋಷಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮಕ್ಕಳ ವೈದ್ಯೆಯಾಗಿರುವ ಸಚಿನ್ ಪತ್ನಿ ಅಂಜಲಿ ತೆಂಡುಲ್ಕರ್ 2019ರಲ್ಲಿ ಸಚಿನ್ ತೆಂಡುಲ್ಕರ್ ಫೌಂಡೇಷನ್ ಸ್ಥಾಪಿಸಿದ್ದರು. ಇದು ಬಡ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಅಂಜಲಿ ಕೂಡ ಇದರ ನಿರ್ದೇಶಕಿಯಾಗಿದ್ದಾರೆ.
ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ವೃತ್ತಿಪರ ಕ್ರಿಕೆಟಿಗನಾಗಿದ್ದು, ದೇಶೀಯ ಕ್ರಿಕೆಟ್ನಲ್ಲಿ ಗೋವಾ ಪರ ಆಡುತ್ತಾರೆ. 25 ವರ್ಷದ ಅರ್ಜುನ್ ಇತ್ತೀಚೆಗೆ ಐಪಿಎಲ್ ಮೆಗಾ ಹರಾಜಿನಲ್ಲಿ 30 ಲಕ್ಷ ರೂ. ಮೂಲಬೆಲೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು.