

ಹೈದರಾಬಾದ್: ಮಾಜಿ ವಿಶ್ವ ಚಾಂಪಿಯನ್-ವಿಶ್ವ ನಂ. 1 ಷಟ್ಲರ್ ಹಾಗೂ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಡಿಸೆಂಬರ್ 22ರಂದು ಉದಯ್ಪುರದಲ್ಲಿ ನಡೆಯಲಿರುವ ಸಮಾರಂಭದಲ್ಲಿ 29 ವರ್ಷದ ಪಿವಿ ಸಿಂಧು, ಹೈದರಾಬಾದ್ ಮೂಲದ ಉದ್ಯಮಿ ವೆಂಕಟ ದತ್ತ ಸಾಯಿ ಅವರನ್ನು ವಿವಾಹವಾಗಲಿದ್ದಾರೆ.
ವೆಂಕಟ ದತ್ತ ಸಾಯಿ ಅವರು ಪೊಸಿಡೆಕ್ಸ್ ಟೆಕ್ನಾಲಜೀಸ್ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ವಿವಾಹ ಪೂರ್ವಭಾವಿ ಕಾರ್ಯಕ್ರಮಗಳು ಡಿಸೆಂಬರ್ 20ರಂದೇ ಶುರುವಾಗಲಿವೆ. ಡಿಸೆಂಬರ್ 24ರಂದು ಹೈದರಾಬಾದ್ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಸಿಂಧು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಭಾನುವಾರವಷ್ಟೇ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರುವ ಮೂಲಕ ಸಿಂಧು 2 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿದ್ದರು. ಜನವರಿ ನಂತರ ಸಿಂಧು ಬ್ಯಾಡ್ಮಿಂಟನ್ ಆಟದಲ್ಲಿ ಬಿಜಿಯಾಗಲಿರುವುದರಿಂದ ಇದುವೇ ವಿವಾಹಕ್ಕೆ ಸೂಕ್ತ ಸಮಯವೆನಿಸಿದೆ ಎಂದು ಸಿಂಧು ತಂದೆ ಪಿವಿ ರಮಣ ತಿಳಿಸಿದ್ದಾರೆ.