ಹರಿಯಾಣದಲ್ಲಿ ಜಡ್ಜ್​ ಕಾರಿನ ಮೇಲೆಯೇ ದಾಳಿ ಮಾಡಿ ಬೆಂಕಿ ಇಟ್ಟ ಕಿಡಿಗೇಡಿಗಳು: ಎಫ್​ಐಆರ್​ನಿಂದ ಬಹಿರಂಗ

Car
Published on

ಚಂಡೀಗಢ: ಹರಿಯಾಣದ ನುಹ್​ ಜಿಲ್ಲೆಯ ಕೋಮುಗಲಭೆಯ ವೇಳೆ ಅಡಿಷನಲ್​ ಚೀಫ್​ ಜುಡಿಷಿಯಲ್​ ಮ್ಯಾಜಿಸ್ಟ್ರೇಟ್​ ಮತ್ತು ಅವರ ಮೂರು ವರ್ಷದ ಮಗಳು, ಗಲಭೆಕೋರರ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿರುವ ಭಯಾನಕ ಸಂಗತಿ ಎಫ್​ಐಆರ್​ನಿಂದ ಬಯಲಾಗಿದೆ.

ಅಂಜಲಿ ಜೈನ್​ ಎಂಬುವರು ನುಹ್​ ಜಿಲ್ಲೆಯ ಅಡಿಷನಲ್​ ಚೀಫ್​ ಜುಡಿಷಿಯಲ್​ ಮ್ಯಾಜಿಸ್ಟ್ರೇಟ್​ (ಎಸಿಜೆಎಂ) ಆಗಿದ್ದಾರೆ. ಸೋಮವಾರ ಕೋಮುಗಲಭೆಯ ವೇಳೆ ಜಡ್ಜ್​ ಮತ್ತು ಅವರ ಮಗಳಿದ್ದ ಕಾರಿನ ಮೇಲೆ ದಾಳಿ ಮಾಡಿದ ದಾಳಿಕೋರರು ಕಾರಿಗೆ ಬೆಂಕಿ ಇಟ್ಟರು. ಈ ವೇಳೆ ಕಾರಿನಿಂದ ಇಳಿದು, ಗಲಭೆಕೋರರಿಂದ ತಪ್ಪಿಸಿಕೊಂಡು ಓಡಿ ಹೋಗುವ ಮೂಲಕ ಇಬ್ಬರು ಪಾರಾಗಿದ್ದಾರೆ. ಈ ಭಯಾನಕ ಸಂಗತಿ ನುಹ್​ ನಗರ ಪೊಲೀಸ್​ ಠಾಣೆಯಲ್ಲಿ ಮಂಗಳವಾರ ದಾಖಲಾಗಿರುವ ಎಫ್​ಐಆರ್​ ಬಹಿರಂಗಪಡಿಸಿದೆ.

ನ್ಯಾಯಾಧೀಶರು, ಅವರ ಮಗಳು ಮತ್ತು ಸಿಬ್ಬಂದಿ ನುಹ್‌ನ ಹಳೆಯ ಬಸ್ ನಿಲ್ದಾಣದ ವರ್ಕ್​ಶಾಪ್​ನಲ್ಲಿ ಆಶ್ರಯ ಪಡೆಯಬೇಕಾಯಿತು. ಇದಾದ ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಲವು ವಕೀಲರು ಅವರನ್ನು ರಕ್ಷಿಸಿದರು. ನುಹ್​ನ ಎಸಿಜೆಎಂ ನ್ಯಾಯಾಲಯದಲ್ಲಿ ಪ್ರೊಸೆಸ್ಸರ್​ ಸರ್ವರ್​​ ಆಗಿ ಕೆಲಸ ಮಾಡುವ ತೇಕ್​ ಚಾಂದ್​ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

ಎಫ್​ಐಆರ್​ ಪ್ರಕಾರ ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಜಡ್ಜ್​ ಮತ್ತು ಅವರ ಮೂರು ವರ್ಷದ ಮಗಳು ಮತ್ತು ಗನ್​ಮ್ಯಾನ್​ ಸಿಯಾರಾಮ್​, ನಲ್ಹಾರ್​ನಲ್ಲಿರುವ ಎಸ್​ಕೆಎಂ ಮೆಡಿಕಲ್​ ಕಾಲೇಜಿಗೆ ಮೆಡಿಸಿನ್​ ಖರೀದಿಗೆಂದು ವೋಲ್ಕ್ಸ್​ವ್ಯಾಗನ್​ ಕಾರಿನಲ್ಲಿ ತೆರಳಿದ್ದರು. ಸುಮಾರು 2ಗಂಟೆ ಸುಮಾರಿಗೆ ಮಡಿಕಲ್​ ಕಾಲೇಜಿನಿಂದ ಹಿಂದಿರುಗಿ ಸುಮಾರು 100 ರಿಂದ 150 ಮೀಟರ್​ ದೂರ ಬಂದಾಗ ಗಲಭೆಕೋರರು ದೆಹಲಿ-ಅಲ್ವಾರ್​ ರಸ್ತೆಯ ಹಳೆಯ ಬಸ್​ ನಿಲ್ದಾಣದ ಬಳಿ ದಾಳಿ ಮಾಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 148 (ಗಲಭೆ), 149 (ಕಾನೂನುಬಾಹಿರ ಗುಂಪು), 435 (ಹಾನಿ ಉಂಟುಮಾಡುವ ಉದ್ದೇಶದಿಂದ ಬೆಂಕಿ), 307 (ಕೊಲೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವಿಶ್ವ ಹಿಂದು ಪರಿಷತ್ತಿನ ಮೆರವಣಿಗೆಯನ್ನು ತಡೆಯುವ ಪ್ರಯತ್ನದಲ್ಲಿ ನುಹ್‌ನಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು ಮತ್ತು ಧರ್ಮಗುರು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ಹಿಂಸಾಚಾರ ಗುರುಗ್ರಾಮ್‌ಗೂ ಹರಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net