

Jr NTR: ಪ್ರಸ್ತುತ 'ದೇವರ 2' ಚಿತ್ರದ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿರುವ ಟಾಲಿವುಡ್ ಸ್ಟಾರ್ ನಟ ಜೂ. ಎನ್ಟಿಆರ್, ಹಲವು ಮುಂಬರುವ ಚಿತ್ರಗಳ ಅದ್ಧೂರಿ ವೇದಿಕೆಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ತಮ್ಮ ಸಹೋದರ ಕಲ್ಯಾಣ್ ರಾಮ್ ಜತೆ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವ ಎನ್ಟಿಆರ್, ಕಲ್ಯಾಣ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಅರ್ಜುನ್ ಸನ್ ಆಫ್ ವೈಜಯಂತಿ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಫ್ಯಾನ್ಸ್ಗಳ ನಡೆಗೆ 'ತಾರಕ್' ಬೇಸರ ವ್ಯಕ್ತಪಡಿಸಿದರು.
ಕೆಲವು ನಿಮಿಷ ಅಭಿಮಾನಿಗಳ ಜತೆಗೆ ಚಿತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೂ. ಎನ್ಟಿಆರ್, ಅಭಿಮಾನಿಗಳು ವಿಜಯಶಾಂತಿಗೆ ಮಾತನಾಡಲು ಬಿಡದೆ, ಚೀರಾಡಿದ್ದಕ್ಕೆ ಸಿಟ್ಟಾದರು. ಎನ್ಟಿಆರ್ ಬಳಿಕ ಮೈಕ್ ಹಿಡಿದು ಕಾರ್ಯಕ್ರಮ ಕುರಿತಂತೆ ಮಾತನಾಡಲು ಮುಂದಾದ ವಿಜಯಶಾಂತಿಗೆ ಮಾತನಾಡಲು ಬಿಡದ ಅಭಿಮಾನಿಗಳು, ಜೋರಾಗಿ ಚಿರಾಡಿದರು. ತನ್ನ ಹೆಸರನ್ನು ಕೂಗುತ್ತಿದ್ದ ಅಭಿಮಾನಿಗಳ ವರ್ತನೆಗೆ ಸಿಟ್ಟಾದ ಜೂ. ಎನ್ಟಿಆರ್, ಮೊದಲು ಸುಮ್ಮನಾಗಿ ಅವರಿಗೆ ಮಾತನಾಡಲು ಅವಕಾಶ ಕೊಡಿ ಎಂದರು.
"ನೀವೆಲ್ಲರೂ ಒಂದು ನಿಮಿಷ ತಾಳ್ಮೆಯಿಂದ ಇದ್ದರೆ ವಿಜಯಶಾಂತಿ ಅವರು ಮಾತನಾಡುತ್ತಾರೆ" ಎಂದರು. ಇದಕ್ಕೂ ಸುಮ್ಮನಾಗದ ಫ್ಯಾನ್ಸ್ ನಡೆಗೆ ಜೂ. ಎನ್ಟಿಆರ್ ಕೆರಳಿದರು. "ನೀವು ಹೀಗೆ ಮಾಡಿದರೆ ಖಂಡಿತ ಈ ವೇದಿಕೆಯಿಂದ ನಾನು ಹೊರ ಹೋಗ್ತೀನಿ" ಎಂದು ಸನ್ನೆ ಮಾಡಿದರು. ಆ ನಂತರ ನಟನ ಅಭಿಮಾನಿಗಳು ಮೌನಕ್ಕೆ ಶರಣಾಗಿದ್ದು, ಅವರ ಮೇಲಿನ ಪ್ರೀತಿ, ಅಭಿಮಾನವನ್ನು ತೋರಿದರು,(ಏಜೆನ್ಸೀಸ್).