

ಚಳ್ಳಕೆರೆ: ಪತ್ರಕರ್ತರ ಬಹುವರ್ಷಗಳ ಬೇಡಿಕೆ ನಿವೇಶನ ಸೌಲಭ್ಯದ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ, ಪ್ರಾಮಾಣಿಕ ಪಯತ್ನ ಮಾಡುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ತಾಲೂಕು ಪತ್ರಿಕಾ ಸಂಪಾದಕರ ಸಂಘ ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಿಕಾ ಸೇವಾ ವಲಯದಲ್ಲಿ ಪತ್ರಕರ್ತರು ನಾನಾ ಸಮಸ್ಯೆ ಎದುರಿಸಬೇಕಾಗುತ್ತದೆ. ಕುಟುಂಬ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಬದಿಗಿರಿಸಿ ಪತ್ರಿಕಾ ರಂಗದಲ್ಲಿ ಸೇವೆ ಮಾಡುವವರಿಗೆ ವೃತ್ತಿ ಬದ್ಧತೆ ಇದೆ. ಪತ್ರಕರ್ತರ ಸಮಸ್ಯೆಗಳನ್ನು ಸರ್ಕಾರ ಮಟ್ಟದಲ್ಲಿ ಪ್ರಸ್ತಾಪ ಮಾಡಿ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಶ.ಮಂಜುನಾಥ ಮಾತನಾಡಿ, ಪತ್ರಿಕೋದ್ಯಮ ಜನರ ಒಳಿತಿಗಾಗಿ ಮತ್ತು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾದ್ಯಮವನ್ನು ಹಿಂದಿಕ್ಕಿ ದೃಶ್ಯ ಮಾಧ್ಯಮ ವೇಗವಾಗಿ ಬೆಳೆಯುತ್ತಿದೆ. ಆದರೆ, ಮುದ್ರಣ ಮಾಧ್ಯಮವನ್ನು ಯಾವುದೇ ರೀತಿಯಲ್ಲೂ ಬಲಹೀನಗೊಳಿಸಲು ಸಾಧ್ಯವಿಲ್ಲ.
ದೃಶ್ಯ ಮಾಧ್ಯಮಗಳು ತಮ್ಮ ಇತಿಮಿತಿಯೊಳಗೆ ಸುದ್ದಿ ಪ್ರಕಟಿಸಿ ಪತ್ರಿಕೋದ್ಯಮ ಮೌಲ್ಯವನ್ನು ಕಾಪಾಡಬೇಕಾಗಿದೆ. ಸಮಾಜದ ಅಂಕುಡೊಂಕು ತಿದ್ದುವ ಜವಾಬ್ದಾರಿ ಪತ್ರಕರ್ತರ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ, ತಾಲೂಕಾಧ್ಯಕ್ಷ ಪಿ.ಗಂಗಾಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ನಿವೃತ್ತ ಮುಖ್ಯಶಿಕ್ಷಕ ಎಚ್.ರಾಜಣ್ಣ ಮತ್ತಿತರರು ಇದ್ದರು.