

ಗೌರಿ ಹಬ್ಬವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಹರಿತಾಲಿಕಾ ತೀಜ್ ಎಂದು ಕರೆಯುತ್ತಾರೆ. ಅಂದು ಮುತ್ತೈದೆಯರು ತಮ್ಮ ಪತಿಯ ಆರೋಗ್ಯ, ಶ್ರೇಯಸ್ಸಿಗಾಗಿ ಮಾತೆ ಪಾರ್ವತಿಯ ವ್ರತ ಮಾಡುತ್ತಾರೆ. ಶಿವ-ಪಾರ್ವತಿಯ ಪುಣ್ಯ ಕತೆಯನ್ನು ಓದಿ ಪೂಜೆ ಸಲ್ಲಿಸುತ್ತಾರೆ. ಹೀಗೆ ವ್ರತ ಮಾಡುವವರು ಅದು ಮುಗಿಯುವವರೆಗೂ ಅನ್ನಾಹಾರ, ನೀರನ್ನೂ ಸೇವಿಸುವುದಿಲ್ಲ.
ಇದೀಗ ದೆಹಲಿ ಮೂಲದ ಪತ್ರಕರ್ತೆಯೋರ್ವಳು ಈ ವ್ರತಕ್ಕೆ ಅಪಮಾನ ಮಾಡಿದ್ದಾಳೆ. ತೀಜ್ ವ್ರತ ಕಥಾ ಪುಸ್ತಕವನ್ನು ರದ್ದಿಗೆ ಹಾಕುವುದು ಒಳ್ಳೆಯದು. ನನಗಂತೂ ಇದನ್ನು ಟಾಯ್ಲೆಟ್ ಪೇಪರ್ನಂತೆ ಉಪಯೋಗಿಸಬೇಕು ಎನ್ನಿಸುತ್ತದೆ ಎಂದು ಹೇಳುವ ಮೂಲಕ ಅದೆಷ್ಟೋ ಜನರ ಆಕ್ರೋಶಕ್ಕೆ ಕಾರಣಳಾಗಿದ್ದಾಳೆ. ಇದೊಂದು ಮಹಿಳಾ ವಿರೋಧಿ ವ್ರತವಾಗಿದೆ. ಅನ್ನ, ನೀರು ಮುಟ್ಟದೆ ಪತಿಗಾಗಿ ಪ್ರಾರ್ಥಿಸಬೇಕಂತೆ ಎಂದು ವ್ಯಂಗ್ಯವಾಡಿರುವ ಪತ್ರಕರ್ತೆ, ತಮ್ಮ ಮನೆಯ ಟಾಯ್ಲೆಟ್ ಬಳಿ, ಈ ಪುಸ್ತಕ ಇಟ್ಟಿರುವ ಫೋಟೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾಳೆ.
ಈಕೆಯ ಹೆಸರು ಸುಶ್ಮಿತಾ ಸೇನ್. ವಿಡಿಯೋವೊಂದರನ್ನು ಕೂಡ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪುಸ್ತಕವನ್ನು ಟಾಯ್ಲೆಟ್ ಪೇಪರ್ ಆಗಿ ಬಳಸಬೇಕೋ..ಟಿಶ್ಯೂ ಪೇಪರ್ನಂತೆ ಉಪಯೋಗಿಸಬೇಕೋ ನೀವೇ ಹೇಳಿ ಎಂದೂ ಪ್ರಶ್ನಿಸಿದ್ದಾಳೆ.
ಶಿವ -ಪಾರ್ವತಿ ಫೋಟೋ ಇರುವ ವ್ರತ ಕಥಾ ಪುಸ್ತಕವನ್ನು ಕೈಯಲ್ಲಿ ಹಿಡಿದು ವಿಡಿಯೋ ಮಾಡಿರುವ ಸುಶ್ಮಿತಾ ಸೇನ್, ನಾನು ಈ ಅನುಪಯುಕ್ತ ಪುಸ್ತಕವನ್ನು 15 ರೂಪಾಯಿ ಕೊಟ್ಟು ತೆಗೆದುಕೊಂಡು ಬಂದಿದ್ದೇನೆ. ನನಗಂತೂ ಇದರಿಂದ ಯಾವುದೇ ಉಪಯೋಗವೂ ಆಗಿಲ್ಲ. ಈಗ ಟಿಶ್ಯೂ ಅಥವಾ ಟಾಯ್ಲೆಟ್ ಪೇಪರ್ ಆಗಿ ಬಳಸಬೇಕು ಎಂದು ಇಚ್ಛಿಸುತ್ತಿದ್ದೇನೆ. ನೀವೇನು ಹೇಳುತ್ತೀರಿ ಎಂದು ಕೇಳಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಗೊತ್ತಾಗದೆ ಗಡಿ ದಾಟಿದ ಇವರು ಮರಳಿ ದೇಶಕ್ಕೆ ಕಾಲಿಡಲು 5 ವರ್ಷಗಳೇ ಬೇಕಾದವು…
ಆದರೆ ಈ ಪೋಸ್ಟ್ ಹಾಕುತ್ತಿದ್ದಂತೆ ಸುಶ್ಮಿತಾ ಸೇನ್ ವಿರುದ್ಧ ಅನೇಕರು ಕಿಡಿ ಕಾರಿದ್ದಾರೆ. ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಪತ್ರಕರ್ತೆಗೆ ಅತ್ಯಾಚಾರ ಬೆದರಿಕೆಗಳೂ ಬರುತ್ತಿವೆ ಎನ್ನಲಾಗಿದೆ.
ನಂತರ ಸ್ಪಷ್ಟನೆ ನೀಡಿರುವ ಸುಶ್ಮಿತಾ ಸೇನ್, ನನ್ನ ವಿಡಿಯೋದ ಸಣ್ಣ ತುಣುಕು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹಬ್ಬದ ದಿನ ಉಪವಾಸ ಆಚರಣೆ ಮಾಡದ ಮಹಿಳೆಯರು ವಿಧವೆಯರಾಗುತ್ತಾರೆ. ಮಕ್ಕಳಾಗುವುದಿಲ್ಲ ಹಾಗೇ ಮುಂದಿನ ಜನ್ಮಗಳಲ್ಲಿ ಬಡವಳಾಗಿ ಹುಟ್ಟುತ್ತಾಳೆ ಎಂಬಿತ್ಯಾದಿಯಾಗಿ ಪುಸ್ತಕದಲ್ಲಿ ಹೇಳಲಾಗಿದೆ. ಇದೆಲ್ಲ ಮಹಿಳಾ ವಿರೋಧಿ ಅಲ್ಲವೇ ಎಂದು ಪತ್ರಕರ್ತೆ ಸಮಜಾಯಿಶಿ ನೀಡಿದ್ದಾಳೆ. ಇದನ್ನೂ ಓದಿ: ಸುಶಾಂತ್‌ಗೆ ನ್ಯಾಯ ಸಿಗಲಿದೆ, ಸುರೇಶ್ ರೈನಾ ಭಾವಪೂರ್ಣ ಸಂದೇಶ
ಈಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾಳೆ ಎಂದು ಆರೋಪಿಸಿ ಹಲವು ಸೋಷಿಯಲ್ ಮೀಡಿಯಾ ಬಳಕೆದಾರರು ದೂರು ದಾಖಲಿಸಿದ್ದಾರೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರೂ ಕೂಡ ಟ್ವೀಟ್ ಮೂಲಕ ಪತ್ರಕರ್ತೆಯ ನಡೆಯನ್ನು ಖಂಡಿಸಿದ್ದಾರೆ. ಈ ಮಹಿಳೆ ಯಾರು..ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಯಾರಾದರೂ ತಿಳಿಸುವಿರಾ? ಶಿವ-ಪಾರ್ವತಿಯ ಚಿತ್ರವಿರುವ ಫೋಟೋವನ್ನು ಟಾಯ್ಲೆಟ್ ಬಳಿ ಇಡಲಾಗಿದೆಯಲ್ಲ..ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್)