

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ನಾಗಮಣಿ ಎಸ್. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಎಂಬತ್ತೇಳನೇ ವಸಂತಕ್ಕೆ ಪದಾರ್ಪಣೆ ಮಾಡಿರುವ ಅವರು ಸುದ್ದಿಮನೆಯಲ್ಲಿ ದಶಕಗಳ ಕಾಲ ದಣಿವರಿಯದೆ ಕೆಲಸ ಮಾಡಿದವರು. ಅವರ ಸುಧೀರ್ಘ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮೈಸೂರಿನಲ್ಲಿ ನಡೆಯುವ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಗಡೂರು ತಿಳಿಸಿದ್ದಾರೆ.
ನಾಗಮಣಿ ಅವರು ವರದಿಗಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿ ಆಕಾಶವಾಣಿ ಸೇರಿದರು. ಅವರ ಕಂಚಿನ ಕಂಠದ ಪ್ರದೇಶ ಸಮಾಚಾರ ವಾರ್ತೆ ಮೂಲಕ ಮನೆಮಾತಾದವರು. ವಿಧಾನಸಭೆ ಅಧಿವೇಶನ, ಭಾರತ-ಪಾಕ್ ಯುದ್ಧದ ವರದಿಗಳನ್ನು ಆ ಕಾಲಘಟ್ಟದಲ್ಲಿ ಮನತಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟದ್ದು ವಿಶೇಷ ಎಂಬುದಾಗಿ ಕೆಯುಡಬ್ಲ್ಯುಜೆ ಸ್ಮರಿಸಿಕೊಂಡಿದೆ.
ನಾಗಮಣಿ ಅವರು ವಾರ್ತೆಗಳನ್ನು ಓದುವ ಶೈಲಿ ವಿಶಿಷ್ಟವಾಗಿದ್ದು, ಸ್ಪಷ್ಟವಾದ ಮಧುರವಾಣಿ ಅವರದು. ಆಕಾಶವಾಣಿ ಸುದ್ದಿ ವಿಭಾಗದಲ್ಲಿ ಭಾರತೀಯ ಸಮಾಚಾರ ಸೇವೆಯ ಅಧಿಕಾರಿಯಾಗಿ, ಸಹಾಯಕ ಸಂಪಾದಕಿಯಾಗಿ ಅತ್ಯಂತ ಸಂಕೀರ್ಣವಾದ ಪರಿಸ್ಥಿತಿಗಳಲ್ಲಿ ಅವರು ನಿರ್ವಹಿಸಿದ ಪಾತ್ರ ಮಹತ್ತರವಾದುದು.
1962ರ ಭಾರತ-ಚೀನಾ ಸಮರ, 1965ರ ಭಾರತ-ಪಾಕ್ ಯುದ್ಧ, 1971ರ ಬಾಂಗ್ಲಾ ವಿಮೋಚನಾ ಸಮರ, 1962-94ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳು, ದುರಂತಗಳು, ಅಪಘಾತಗಳು ಮುಂತಾದ ಸಂದರ್ಭಗಳಲ್ಲಿ ಅವರು ಪ್ರಸಾರ ಕಾರ್ಯಕ್ರಮಗಳನ್ನು ಕಟ್ಟಿಕೊಡುತ್ತಿದ್ದ ರೀತಿ ಅನನ್ಯವಾಗಿತ್ತು.
ಹಣಕಾಸು ನಿರ್ವಹಣೆ, ಮೂಢನಂಬಿಕೆಗಳ ನಿವಾರಣೆ, ವೈಜ್ಞಾನಿಕ ಮನೋಭಾವದ ಬೆಳವಣಿಗೆ, ಸಾಮಾಜಿಕ ಬದಲಾವಣೆ, ಮಹಿಳಾ ಜಾಗೃತಿ ಮೊದಲಾದ ವಿಷಯಗಳ ಬಗ್ಗೆ ಲೇಖನಗಳನ್ನು ಕೂಡ ಬರೆದು ಗಮನಸೆಳೆದವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತು ಪದಾಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಇಂದಿರಾ ಗಾಂಧಿ ಅವರು ಬೆಂಗಳೂರು ಕೆ.ಜಿ.ರಸ್ತೆಯಲ್ಲಿನ ಕಲ್ಲಿನ ಕಟ್ಟಡದಲ್ಲಿದ್ದ ಕೆಯುಡಬ್ಲ್ಯುಜೆ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಸ್ವಾಗತ ಮಾಡಿದ ಆ ಕಾಲಘಟ್ಟದ ಏಕೈಕ ಮಹಿಳಾ ಪತ್ರಕರ್ತೆ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.
1992ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಪತ್ರಕರ್ತೆ ನಾಗಮಣಿ ರಾವ್. 1993ರಲ್ಲಿ ಆರಂಭವಾದ ಟಿಯೆಸ್ಸಾರ್ ಪ್ರಶಸ್ತಿಯನ್ನು 11 ವರ್ಷಗಳ ನಂತರ ಆ ಪ್ರಶಸ್ತಿಗೆ ಪಾತ್ರರಾದ ಮೊದಲ ಪತ್ರಕರ್ತೆ ಕೂಡ ಅವರೇ ಆಗಿದ್ದು, ಆರ್ಯಭಟ ಪ್ರಶಸ್ತಿ, ಸ್ವರ ಲಿಪಿ ಪ್ರತಿಷ್ಠಾನದ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳೂ ಅವರಿಗೆ ಸಂದಿವೆ.
ಸ್ತ್ರೀಪಥ, ಧೀಮತಿಯರು ಮುಂತಾದವು ನಾಗಮಣಿ ಅವರ ಮಹತ್ವದ ಕೃತಿಗಳು. ಏಕಲವ್ಯ ಮಕ್ಕಳ ಸಾಹಿತ್ಯ, ಸಂವರ್ಧಿನೀ, ಲೇಖ-ಲೋಕ-2, ಧೀಮಂತ ಪತ್ರಕರ್ತ 'ತಾಯಿನಾಡು' ಪಿ.ಆರ್.ರಾಮಯ್ಯ, ರಂಗಲೇಖಕಿ, ಬಸ್ಸಿನೊಳಗೊಂದು ಪ್ರಜಾಪ್ರಭುತ್ವ ಮತ್ತು ಇತರ ನಾಟಕಗಳಲ್ಲದೆ, ಚಿಂತಲಪಲ್ಲಿ ವೆಂಕಟರಾವ್, ಟಿ. ಸುನಂದಮ್ಮ, ಮದರ್ ತೆರೇಸಾ ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ ಎಂದು ಕೆಯುಡಬ್ಲ್ಯುಜೆ ತಿಳಿಸಿದೆ.