

ಹಾಸನ: ಗೃಹ ಸಚಿವರಿಗೆ ಎಸ್ಕಾರ್ಟ್ ಮಾಡುತ್ತಿದ್ದ ಪೊಲೀಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವಿಗೀಡಾದ ಪ್ರಕರಣ ಸಂಭವಿಸಿದೆ. ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿಯೇ ಈ ಅಪಘಾತ ಸಂಭವಿಸಿದೆ.
ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಸಾವಿಗೀಡಾದ ಬೈಕ್ ಸವಾರ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಡಿಆರ್ ಇನ್ಸ್ಪೆಕ್ಟರ್ ರಾಮು ಎಸ್ಕಾರ್ಟ್ ಮಾಡುತ್ತಿದ್ದರು. ಈ ವೇಳೆ ಪೆಟ್ರೋಲ್ ಬಂಕ್‌ನಿಂದ ಬರುತ್ತಿದ್ದ ಬೈಕ್ ಸವಾರ ಎಸ್ಕಾರ್ಟ್ ವಾಹನಕ್ಕೆ ಅಡ್ಡ ಬಂದಿದ್ದ ಎನ್ನಲಾಗಿದೆ.
ಕೆಎ 13 ಜಿ 1467 ನಂಬರ್‌ನ ಪೊಲೀಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೈಕ್ ಸವಾರ ರಮೇಶ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮತ್ತೊಂದೆಡೆ ಅಪಘಾತದ ವಿಚಾರ ತಿಳಿದರೂ ಗೃಹ ಸಚಿವರು ವಾಹನ ನಿಲ್ಲಿಸದೆ ಹಾಗೇ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.