ಹಿಂದೂ ದೇವರುಗಳ ಮೇಲೆ ಅಪಹಾಸ್ಯ... ಕಾಮಿಡಿಯನ್​​ ಮುನಾವರ್ ಫಾರೂಕಿ ಹತ್ಯೆಗೆ ಸಂಚು! Munawar Faruqui

Munawar Faruqui
Published on

Munawar Faruqui : ಸ್ಟ್ಯಾಂಡ್-ಅಪ್ ಕಾಮಿಡಿಯನ್​​ ಮುನಾವರ್ ಫಾರೂಕಿ ಹತ್ಯೆಗೆ ಗ್ಯಾಂಗ್​ಸ್ಟರ್​ಗಳಾದ ​​ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ. ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುವ ಮೂಲಕ ಫಾರೂಕಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಇದೇ ಕಾರಣಕ್ಕೆ ಆತ ಗ್ಯಾಂಗ್​ಸ್ಟಾರ್​ಗಳ ಹಿಟ್ ಲಿಸ್ಟ್‌ ಸೇರಿದ್ದಾನೆ ಎನ್ನಲಾಗಿದೆ.

ಫಾರೂಕಿ ಹತ್ಯೆಗೆ ಪಿತೂರಿ ನಡೆದಿತ್ತು ಎಂಬ ಮಾಹಿತಿಯನ್ನು ದೆಹಲಿ ಪೊಲೀಸರು ಹಂಚಿಕೊಂಡಿದ್ದಾರೆ. ದೆಹಲಿಯ ಗುಪ್ತಚರ ತಂಡ ಹತ್ಯೆಕೋರರ ಸಂಚನ್ನು ವಿಫಲಗೊಳಿಸಿದ ಬಳಿಕ ಈ ಮಾಹಿತಿ ಬೆಳಕಿಗೆ ಬಂದಿದೆ.

ಹರಿಯಾಣದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ರಾಹುಲ್ ಮತ್ತು ಸಾಹಿಲ್ ಇತ್ತೀಚೆಗೆ ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ದೆಹಲಿ ಪೊಲೀಸರ ಗುಪ್ತಚರ ತಂಡಕ್ಕೆ ಸಿಕ್ಕಿತು. ಕೂಡಲೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಶೂಟರ್​ಗಳಾದ ಅವರಿಬ್ಬರನ್ನು ಬಂಧಿಸಲು ಪ್ಲ್ಯಾನ್​ ಮಾಡಿಕೊಂಡಿದ್ದರು. ಅದರಂತೆ, ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾಗ, ಅವರಿಬ್ಬರು ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಂತರ, ಪೊಲೀಸರು ಆರೋಪಿಗಳ ಕಾಲಿಗೆ ಗುಂಡಿಕ್ಕಿ ಅವರನ್ನು ಬಂಧಿಸಿ, ಅವರ ಬಳಿ ಇದ್ದ ಬಂದೂಕುಗಳು ಮತ್ತು ಬೈಕ್ ಅನ್ನು ವಶಪಡಿಸಿಕೊಂಡರು.

ಇದಾದ ಬಳಿಕ ನಡೆದ ಪೊಲೀಸ್ ತನಿಖೆಯಲ್ಲಿ ಸ್ಫೋಟಕ ವಿಷಯಗಳು ಬೆಳಕಿಗೆ ಬಂದಿವೆ. ಬಾಂಬೆ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಮುನಾವರ್ ಫಾರೂಕಿ ಅವರನ್ನು ಒಂದು ಗ್ಯಾಂಗ್​ ಗುರಿಯಾಗಿಸಿಕೊಂಡಿರುವುದು ಬಹಿರಂಗವಾಯಿತು. ಫಾರೂಕಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಾಗ, ಅವರನ್ನು ಗುರಿಯಾಗಿಸಿಕೊಂಡಿದ್ದರು. ಆದಾಗ್ಯೂ, ಫಾರೂಕಿ ಬೇರೆ ಕಾರಿನಲ್ಲಿ ಹೊರಟುಹೋದಾಗ ಯೋಜನೆ ವಿಫಲವಾಯಿತು. ದೆಹಲಿಯಲ್ಲಿ ಅವರು ಮತ್ತೆ ಫಾರೂಕಿಯನ್ನು ಗುರಿಯಾಗಿಸಲು ಪ್ರಯತ್ನಿಸಿದಾಗ, ಪೊಲೀಸರು ಅವರಿಬ್ಬರನ್ನು ಬಂಧಿಸಿದ್ದಾರೆ.

ಯಾರು ಈ ಫಾರೂಕಿ?

ಅಂದಹಾಗೆ ಮುನಾವರ್​ ಫಾರೂಕಿ ಸ್ಟ್ಯಾಂಡಪ್​ ಕಾಮಿಡಿಯನ್​ ಮಾತ್ರವಲ್ಲ, ರ್ಯಾಪರ್​ ಕೂಡ ಹೌದು. ಗುಜರಾತಿನ ಜುನಾಗಢದಲ್ಲಿ ಜನಿಸಿದರು. ಕಂಗನಾ ರಣಾವತ್​ ನಡೆಸಿಕೊಟ್ಟ ಲಾಕಪ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಅಲ್ಲದೆ, ಬಿಗ್​ಬಾಸ್​ ಸೀಸನ್​ 17ರ ಸ್ಪರ್ಧಿಸಿದ್ದರು ಮತ್ತು ವಿಜೇತರಾಗಿ ಹೊರಹೊಮ್ಮಿದರು. ಅನೇಕ ಬಾರಿ ತನ್ನ ಕಾಮಿಡಿ ಶೋಗಳಲ್ಲಿ ಹಿಂದು ದೇವರುಗಳನ್ನು ಅವಹೇಳನ ಮಾಡಿರುವ ಆರೋಪ ಹೊತ್ತಿದ್ದು, ಈ ಕಾರಣಕ್ಕೆ ಬಿಷ್ಣೋಯ್​ ಗ್ಯಾಂಗ್​ ಕೂಡ ಫಾರೂಕಿಯನ್ನು ಟಾರ್ಗೆಟ್​ ಮಾಡಿದೆ. ಈ ಹಿಂದೆ ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ ಇಬ್ಬರು ಬಂದೂಕುಧಾರಿಗಳು ಫಾರೂಕಿ ಮೇಲೆ ಗುರಿಯಿಟ್ಟಿದ್ದರು. ಈ ವೇಳೆ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಫಾರೂಕಿಯನ್ನು ರಕ್ಷಣೆ ಮಾಡಿ ಮುಂಬೈಗೆ ಸ್ಥಳಾಂತರಿಸಿದ್ದರು ಎಂದು ತಿಳಿದುಬಂದಿದೆ. ಇನ್ನು 2021 ರಲ್ಲಿ, ಫಾರೂಕಿ ಮಧ್ಯಪ್ರದೇಶದ ಹಿಂದೂ ದೇವಾಲಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರು. ಇದು ತೀವ್ರ ವಿರೋಧಕ್ಕೆ ಕಾರಣವಾಯಿತು. ನಂತರ ಅವರನ್ನು ಪೊಲೀಸರು ಬಂಧಿಸಿದರು. ಒಂದು ತಿಂಗಳು ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net