ಜೋ ಬಿಡೆನ್​, ಎಲಾನ್​ ಮಸ್ಕ್​ ಟ್ವಿಟರ್​ ಖಾತೆಗಳೇ ಹ್ಯಾಕ್​

twitter
Published on

ಸ್ಯಾನ್​ಫ್ರಾನ್ಸಿಸ್ಕೋ: ಅಮೆರಿಕದ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೋ ಬಿಡೆನ್​ ಸೇರಿ ಹಲವು ಪ್ರತಿಷ್ಠಿತರ ಟ್ವಿಟರ್​ ಖಾತೆಗಳಿಗೆ ದುಷ್ಕರ್ಮಿಗಳು ಕನ್ನಾ ಹಾಕಿದ್ದಾರೆ. ಟೆಸ್ಲಾ ಸಿಇಒ ಎಲಾನ್​ ಮಸ್ಕ್​, ಮೈಕ್ರೋಸಾಫ್​ನ ಸಹಸಂಸ್ಥಾಪಕ ಬಿಲ್​ ಗೇಟ್ಸ್​ ಮತ್ತು ಆ್ಯಪಲ್​ ಸಂಸ್ಥೆಯ ಟ್ವಿಟರ್​ ಹ್ಯಾಂಡಲ್​ಗಳು ಕೂಡ ಹ್ಯಾಕ್​ ಆಗಿರುವುದಾಗಿ ಹೇಳಲಾಗಿದೆ. ಕ್ರಿಪ್ಟೋಕರೆನ್ಸಿ ಹಗರಣದ ಭಾಗವಾಗಿ ದುಷ್ಕರ್ಮಿಗಳು ಈ ಖಾತೆಗಳನ್ನು ಹ್ಯಾಕ್​ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಟೆಸ್ಲಾದ ಸಿಇಒ ಅವರ ಟ್ವಿಟರ್​ ಹ್ಯಾಂಡಲ್​ನಿಂದ ಬುಧವಾರ ಸಂಜೆ 4.17ರಲ್ಲಿ, ಕೋವಿಡ್​-19ರಿಂದಾಗಿ ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಎಂಬ ಮಹದಿಚ್ಛೆ ಮನಸ್ಸಿನಲ್ಲಿ ಮೂಡಿದೆ. ಆದ್ದರಿಂದ ಮುಂದಿನ ಒಂದು ಗಂಟೆಯಲ್ಲಿ ನನ್ನ ಬಿಟಿಸಿ ಖಾತೆಗೆ ಯಾರು ಎಷ್ಟು ಹಣ ಪಾವತಿಸುತ್ತಾರೋ ಅದರ ಎರಡು ಪಟ್ಟು ಹಣವನ್ನು ನಾನು ಮರಳಿಸುತ್ತೇನೆ ಎಂಬ ವಿಚಿತ್ರವಾದ ಸಂದೇಶ ಪ್ರಕಟವಾಗಿತ್ತು. ಇದರ ಜತೆಗೆ ಬಿಟ್​ಕಾಯಿನ್​ ವಿಳಾಸವನ್ನು ಕೂಡ ಅಟ್ಯಾಚ್​ ಮಾಡಲಾಗಿತ್ತು.

ಇದಾದ ಬಳಿಕ ಈ ಟ್ವೀಟ್​ ಅನ್ನು ಡಿಲೀಟ್​ ಮಾಡಿದ ಹ್ಯಾಕರ್​, ನನ್ನ ಬಿಟಿಸಿ ಖಾತೆಗೆ ಕಳುಹಿಸಿದ ಪಾವತಿಗಳಿಗೆ ಎರಡು ಪಟ್ಟು ಹಣ ಮರಳಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನೀವು 1 ಸಾವಿರ ಡಾಲರ್​ ಕಳುಹಿಸಿದರೆ ನಾನು 2 ಸಾವಿರ ಡಾಲರ್​ ಮರಳಿಸುತ್ತೇನೆ. ಈ ಆಫರ್​ ಮುಂದಿನ 30 ನಿಮಿಷಗಳಿಗೆ ಮಾತ್ರವೇ ಲಭ್ಯ ಎಂಬ ಇನ್ನೊಂದು ಸಂದೇಶವನ್ನು ಪ್ರಕಟಿಸಿದ್ದ.

ಎಲಾನ್ ಮಸ್ಕ್​ ರೀತಿಯಲ್ಲೇ ಬಿಲ್​ ಗೇಟ್ಸ್​ ಅವರ ಖಾತೆಯಿಂದಲೂ ಇದೇ ಬಗೆಯಲ್ಲಿ ಸಂದೇಶಗಳನ್ನು ಪ್ರಕಟಿಸಲಾಗಿತ್ತು. ಅಷ್ಟೇ ಅಲ್ಲ, ಈಗಲೂ ಕೂಡ ಈ ಎರಡು ಖಾತೆಗಳಿಂದ ಇದೇ ಅರ್ಥದ ಟ್ವೀಟ್​ಗಳು ಪದೇಪದೆ ಪ್ರಕಟವಾಗುತ್ತಲೇ ಇವೆ.

ಈ ಎರಡು ಖಾತೆಗಳ ಬೆನ್ನಲ್ಲೇ ಹ್ಯಾಕರ್​ಗಳು ಆ್ಯಪಲ್​, ಉಬರ್​ ಮತ್ತು ಕೇನ್​ ವೆಸ್ಟ್​ ಅವರ ಟ್ವಿಟರ್​ ಖಾತೆಗಳನ್ನೂ ಹ್ಯಾಕ್​ ಮಾಡಲಾಗಿದೆ. ಕೇವಲ ಪ್ರತಿಷ್ಠಿತ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಮಾತ್ರವೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಈ ಕೃತ್ಯ ಎಸಗುತ್ತಿದ್ದಾರೆ ಎಂದು ಭಾವಿಸಲಾಗಿದೆ.

ಕೆಮರೂನ್​ ಮತ್ತು ಟೈಲರ್​ ವಿಂಕ್ಲೆವಾಸ್​ ಅವರು ಸೇರಿ ಜನಪ್ರಿಯ ಕ್ರಿಪ್ಟೋ ಟ್ವಿಟರ್​ ಖಾತೆಗಳ ಜತೆಗೆ ಜೆಮಿನಿ ಕ್ರಿಪ್ಟೋ ಕರೆನ್ಸಿ ವಿನಿಮಯ ಖಾತೆ, ಜನಪ್ರಿಯವಾದ ವ್ಯಾಲೆಟ್​ ಆ್ಯಪ್​ ಕಾಯಿನ್​ಎಂಬೇಸ್​ ಖಾತೆಗಳಿಗೆ ಕೂಡ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ.

ಟ್ವಿಟರ್​ನ ಲಾಗಿನ್ ಪ್ರೊಸೆಸ್ಸರ್​ನಲ್ಲಿರುವ ತಾಂತ್ರಿಕ ನ್ಯೂನತೆಯನ್ನು ಯಾರೋ ಪತ್ತೆ ಮಾಡಿ, ಅದರ ಲಾಭ ಪಡೆಯಲು ಯತ್ನಿಸುತ್ತಿರಬೇಕು. ಇಲ್ಲವೇ ಯಾವುದೋ ಟ್ವಿಟರ್​ ಉದ್ಯೋಗಿಯ ಅಡ್ಮಿನ್​ ಹಕ್ಕುಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುತ್ತಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net