

ನವದೆಹಲಿ: ಚಲಿಸುತ್ತಿರುವ ವಾಹನಕ್ಕೆ ನಾಯಿ ಅಥವಾ ಇನ್ಯಾವುದೋ ಪ್ರಾಣಿ ಅಡ್ಡಬಂದು ಡಿಕ್ಕಿ ಹೊಡೆಯುವುದು ಅಪರೂಪವೇನಲ್ಲ. ಆದರೆ ಇಲ್ಲೊಂದು ವಿಚಿತ್ರ ಅಪಘಾತ ಸಂಭವಿಸಿದೆ. ನಾಯಿಯೇ ವಾಹನವನ್ನು ಮುಂದಕ್ಕೆ ಚಲಾಯಿಸಿ ಆರ್ಟ್ ಗ್ಯಾಲರಿಯೊಂದಕ್ಕೆ ಡಿಕ್ಕಿ ಹೊಡೆಸಿದೆ.
ಜೀಪ್ ಮಾಲೀಕ ಅದರೊಳಗೆ ಇಲ್ಲದ ಸಂದರ್ಭದಲ್ಲಿ ಆತನ ಸಾಕುನಾಯಿ ಇಂಥದ್ದೊಂದು ಕಿತಾಪತಿ ನಡೆಸಿದೆ. ಅಮೆರಿಕದ ವಿಸ್ಕಾನ್ಸಿನ್ನ ಸ್ಟರ್ಜನ್ ಬೇ ಎಂಬಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಜೀಪ್ ಅಲ್ಲೇ ಎದುರಿಗಿದ್ದ ಆರ್ಟ್ ಲೈಬ್ರರಿಗೆ ಹೋಗಿ ಡಿಕ್ಕಿ ಹೊಡೆದಿದೆ. ಆದರೆ ತಕ್ಷಣ ಕಾರಿನ ಬಳಿ ಬಂದು ಒಳನೋಡಿದವರಿಗೆ ಕಾಣಿಸಿದ್ದು ನಾಯಿ ಮಾತ್ರ.
ಹೌದು.. ಐದು ವರ್ಷದ ಆಸ್ಟ್ರೇಲಿಯನ್ ಶೆಫರ್ಡ್ ತಳಿಯ ನಾಯಿ ಕ್ಯಾಲಿ ಇಂಥದ್ದೊಂದು ಅವಾಂತರಕ್ಕೆ ಕಾರಣವಾಗಿದೆ. ಕಾರೊಳಗಿದ್ದ ಈ ನಾಯಿ ಡ್ರೈವರ್ ಸೀಟ್ ಪಕ್ಕ ಇರುವ ಶಿಫ್ಟರ್ನನ್ನು ಡ್ರೈವ್ ಮೋಡ್ಗೆ ಹಾಕಿದ್ದೇ ಇಷ್ಟಕ್ಕೆಲ್ಲ ಕಾರಣ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಡ್ರೈವರ್ನನ್ನು ಕರೆಸಿ ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿದ್ದಾರೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಏನೂ ಆಗಿಲ್ಲ. (ಏಜೆನ್ಸೀಸ್)