

ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಮೂರು ಮಹಾನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಹಣಾಹಣಿ ಶುರುವಾಗಿದೆ. ಆಡಳಿತರೂಢ ಬಿಜೆಪಿಗಂತೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿವೆ. ನೂತನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಗೂ ಸವಾಲಾಗಿವೆ. ಬಿಜೆಪಿ ಜತೆಗೆ ನೇರ ಪೈಪೋಟಿಗೆ ಕಾಂಗ್ರೆಸ್ ಕೂಡ ಸಜ್ಜಾಗಿದೆ. ಈ ಎರಡು ಪಕ್ಷಗಳ ನಡುವೆ ಜೆಡಿಎಸ್ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತಾಗಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜತೆಗೆ ಚುನಾವಣೆಗೆ ಉಸ್ತುವಾರಿಗಳನ್ನೂ ನೇಮಕ ಮಾಡಿವೆ. ಆದರೆ, ಜೆಡಿಎಸ್ ಉತ್ತರ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಪ್ರಾಬಲ್ಯ ಸ್ಥಾಪಿಸುವುದಾಗಿ ಹೇಳುತ್ತಲೇ ಬರುತ್ತಿದೆಯೇ ಹೊರತು ಈ ಮೂರೂ ಮಹಾನಗರ ಪಾಲಿಕೆಯಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುವಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕೂಡ ಅನುಮಾನ. ಮೂರೂ ಕಡೆ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುವುದು ಗ್ಯಾರಂಟಿ. ಹಾಗಾಗಿ ಬಸವರಾಜ ಬೊಮ್ಮಾಯಿಗೆ ಅಗ್ನಿ ಪರೀಕ್ಷೆಯಾಗಿದೆ.
ಕುಮಾರಸ್ವಾಮಿ ಕನಸಿಗೆ ತಣ್ಣೀರು: ಬೆಳಗಾವಿ ಮಹಾನಗರ ಪಾಲಿಕೆಯ 58, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82, ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದೆ. ಅನೇಕ ವಾರ್ಡ್ಗಳಲ್ಲಿ ಸ್ಪರ್ಧಿಸಲು ಜೆಡಿಎಸ್ಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಇದು ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಡಿತ ಸಾಧಿಸಬೇಕೆಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಸೆಗೆ ತಣ್ಣೀರೆರಚಿರುವುದು ಸುಳ್ಳಲ್ಲ.