

ಕೊಪ್ಪ: ಸಾಹಿತ್ಯ ಎಂಬುದು ಬದುಕಿನ ಹೊಸ ಕಿಟಕಿಯ ಮೂಲಕ ಅನುಭವಕ್ಕೆ ದಾರಿಯಂತೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಬಾಳಗಡಿಯಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸೇವಾದೀಕ್ಷೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮನುಷ್ಯರ ನಡುವೆ ಒಡನಾಡ ಹೆಚ್ಚಾಗಬೇಕು. ಜಾತಿ, ಮತ, ಧರ್ಮದ ಅಸಮಾನತೆ ಮೀರುವುದೇ ಸಾಹಿತ್ಯ ಎಂದು ತಿಳಿಸಿದರು.
ಹೊಸ ತಲೆಮಾರಿನಲ್ಲಿ ಅದ್ಭುತ ಸಾಹಿತಿಗಳು ಹಾಗೂ ಬರಹಗಾರರಿದ್ದು ಅವರನ್ನು ಗುರುತಿಸುವ ಕೆಲಸವಾಗಬೇಕು. ಪ್ರಸ್ತುತ ಎಷ್ಟು ಓದುಗರಿದ್ದಾರೆಯೋ ಅದಕ್ಕಿಂತ ಹೆಚ್ಚು ಲೇಖಕರಿದ್ದಾರೆ, ಲೇಖಕರಿಗಿಂತ ಹೆಚ್ಚು ಪ್ರಶಸ್ತಿಗಳಿವೆ. ಪ್ರಶಸ್ತಿಗಾಗಿ ಬರವಣಿಗೆ ಆಗಬಾರದು ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಡಾ. ರಾಜ್‌ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿಯಲ್ಲಿ ನಾನೂ ಭಾಗವಹಿಸಿದ್ದೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಭಾರತ ಪ್ರಪಂಚದ ಗಮನ ಸೆಳೆದಿದೆ. ಜಾತಿ, ಮತ, ಧರ್ಮ ಭೇದ ಬಿಟ್ಟು ಒಟ್ಟಾಗಿ ಜೀವಿಸಬೇಕು ಎಂದರು.
ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಒಂದು ಸಂಸ್ಥೆ ಸ್ಥಾಪಿಸಿದ ರಾಜ ಎಂದರೆ ಅದು ನಾಲ್ವಡಿ ಕೃಷ್ಣರಾಜ ಒಡೆಯರ್. ಇಡೀ ರಾಜ್ಯದಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ, ಹೋಬಳಿ ಮಟ್ಟದ ಸಮ್ಮೇಳನ ನಡೆಸಿದ ಕೀರ್ತಿ ಕೊಪ್ಪಕ್ಕೆ ಸಲ್ಲುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಒಗ್ಗೂಡುತ್ತಾರೆ. ಸಾಹಿತ್ಯ, ಸಂಗೀತಕ್ಕೆ ಒಗ್ಗೂಡಿಸುವ ಶಕ್ತಿ ಇದೆ ಎಂದು ತಿಳಿಸಿದರು.
ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ ಅವರು ಪರಿಷತ್‌ನ ಧ್ವಜವನ್ನು ನೂತನ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಎಂ.ಟಿ.ಶಂಕರಪ್ಪ, ನವೀನ್‌ಕುಮಾರ್ ಇದ್ದರು.