6ನೇ ವಾರಕ್ಕೆ ಕಾಲಿಟ್ಟ 'ಜವಾನ್'​; ಚಿತ್ರಮಂದಿರಗಳತ್ತ ಪ್ರೇಕಕರನ್ನು ಸೆಳೆಯುತ್ತಿದೆ ಶಾರೂಖ್​ ಸಿನಿಮಾ

Untitled design - 2023-10-16T083552.628
Published on

ಮುಂಬೈ: ಸೆ.07 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಬಾಲಿವುಡ್​ ಕಿಂಗ್​ ಖಾನ್​ ಅಭಿನಯದ 'ಜವಾನ್'​ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಭರ್ಜರಿ ದಾಖಲೆಗಳನ್ನು ನಿರ್ಮಿಸುವ ಜತೆಗೆ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು.

ಇದೀಗ ಚಿತ್ರ ರಿಲೀಸ್​ ಆಗಿ ಇಂದಿಗೆ 6 ವಾರಗಳು ಕಳೆದಿದ್ದು, 6ನೇ ವಾರವೂ ಕೂಡ 'ಜವಾನ್' ವೀಕ್ಷಿಸಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತೆರಳುತ್ತಿರುವುದು ಸದ್ಯ ಚಿತ್ರತಂಡಕ್ಕೆ ಭಾರೀ ಸಂತಸ ಕೊಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡರೆ ಅದು ಒಂದು ತಿಂಗಳೊಳಗೆ ಥಿಯೇಟರ್​ನಿಂದ ಹೊರ ಉಳಿದು, ಸ್ವಲ್ಪ ದಿನಗಳ ಬಳಿಕ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಹಾಜರಾಗುವುದು ನಮಗೆಲ್ಲಾ ತಿಳಿದೇ ಇದೆ. ಸದ್ಯ ಇದೀಗ ಈ ಸಾಲಿಗೆ ಸೇರದ 'ಜವಾನ್'​ ಸತತ ಆರನೇ ವಾರದಲ್ಲೂ ಕೂಡ ಥಿಯೇಟರ್‌ಗಳತ್ತ ಸಿನಿಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಶುಕ್ರವಾರ (ಅಕ್ಟೋಬರ್ 13) ದೇಶದೆಲ್ಲೆಡೆ ರಾಷ್ಟ್ರೀಯ ಸಿನಿಮಾ ದಿನವನ್ನು ಬಹುತೇಕ ಚಿತ್ರಮಂದಿರಗಳಲ್ಲಿ ಆಯೋಜಿಸಲಾಗಿತ್ತು. ಈ ವೇಳೆ 'ಜವಾನ್' ಚಿತ್ರಕ್ಕೆ ಹೆಚ್ಚಿನ ಮನ್ನಣೆ ಲಭಿಸಿತು. ಇತ್ತೀಚೆಗೆ ಬಿಡುಗಡೆಗೊಂಡ 'ಫ್ಯೂರೆಕಿ 3', 'ಮಿಷನ್ ರಾಣಿಗಂಜ್', 'ಥ್ಯಾಂಕ್ಯೂ ಫಾರ್ ಕಮಿಂಗ್‌'ನಂತಹ ಹೊಸ ಚಿತ್ರಗಳ ಮಧ್ಯೆಯೂ ಜವಾನ್ ಸಿನಿಪ್ರಿಯರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದೆ.

ಜವಾನ್​ ಹಿಂದಿ ಆವೃತ್ತಿಯಲ್ಲಿ ಸುಮಾರು 576 ಕೋಟಿ ರೂ. ನಿವ್ವಳ ಸಂಗ್ರಹಿಸುವ ಮೂಲಕ ಇದೀಗ ಬಾಲಿವುಡ್‌ನಲ್ಲಿ ಇಂಡಸ್ಟ್ರಿ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ಚಿತ್ರ ಜಾಗತಿಕವಾಗಿ ಒಟ್ಟು 1,135 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಚಿತ್ರದಲ್ಲಿ ಶಾರೂಖ್ ಖಾನ್ ಮತ್ತು ನಯನತಾರ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಪ್ರಿಯಾಮಣಿ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net