ಟಿಟಿಡಿಯ ಹೊಸ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಅಧಿಕಾರ ಸ್ವೀಕರಿಸಿದ ಜವಾಹರ ರೆಡ್ಡಿ

k-s jawahar-reddy
Published on

ತಿರುಪತಿ: ಪ್ರಸಿದ್ಧ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಆಡಳಿತ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ)ನ ನೂತನ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಕೆ.ಎಸ್​.ಜವಾಹರ್ ರೆಡ್ಡಿ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸಡಗೋಪಮ್ ಸಮರ್ಪಣೆ ಟಿಟಿಡಿ ಮಂಡಳಿ ಸದಸ್ಯ ಕೃಷ್ಣಮೂರ್ತಿ ವೈದ್ಯನಾಥನ್ ಅವರು 36 ಲಕ್ಷ ರೂಪಾಯಿ ಮೌಲ್ಯದ ಕಿರೀಟದಂತಹ ಸಡಗೋಪಮ್​ ಅನ್ನು ಇಂದು ದೇಗುಲಕ್ಕೆ ಸಮರ್ಪಿಸಿದರು.

ವಾರ್ಷಿಕ ಮೂರು ಸಾವಿರದ ಮುನ್ನೂರು ಕೋಟಿ ರೂಪಾಯಿಗೂ ಅಧಿಕ ಆದಾಯವಿರುವ ದೇವಸ್ಥಾನದ ಆಡಳಿತ ಮಂಡಳಿಯ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಜವಾಹರ ರೆಡ್ಡಿ ಅವರು ಆಂಧ್ರಪ್ರದೇಶದ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ಮುಖ್ಯಕಾರ್ಯದರ್ಶಿ ಆಗಿದ್ದರು.

ಈ ಹುದ್ದೆಯಲ್ಲಿ ರೆಡ್ಡಿ ಅವರು ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಲಿದ್ದಾರೆ. ರಾಜ್ಯ ಸರ್ಕಾರ ಬುಧವಾರವಷ್ಟೇ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಅನಿಲ್ ಕುಮಾರ್ ಸಿಂಘಾಲ್ ಅವರನ್ನು ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರಟರಿಯಾಗಿ ವರ್ಗಾವಣೆ ಮಾಡಿತ್ತು. ಅವರು ಮೂರು ವರ್ಷ ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net