

ಪಟನಾ: ಲೋಕ ಜನಶಕ್ತಿ ಪಾರ್ಟಿ (ಎಲ್ಜೆಪಿ)ಯ ಸಂಸ್ಥಾಪಕ, ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರ ಅಂತ್ಯಸಂಸ್ಕಾರ ಇಂದು ಪಟನಾದ ದಿಘಾ ಘಾಟ್ನಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಪುತ್ರ ಚಿರಾಗ್ ಪಾಸ್ವಾನ್ ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಬೆನ್ನಿಗೆ ಪಿತೃ ವಿಯೋಗದ ವೇದನೆಯೊಂದಿಗೆ ಕುಸಿಯುವ ಸ್ಥಿತಿ ತಲುಪಿದ್ದರು.
ಚಿರಾಗ್ ಅಬೋಧಾವಸ್ಥೆಗೆ ಜಾರಿದಾಗ ಕುಸಿಯದಂತೆ ತಡೆದ ಅವರ ಸೋದರ ಸಂಬಂಧಿಗಳು, ಅಂತ್ಯಸಂಸ್ಕಾರ ಪೂರ್ಣಗೊಳಿಸುವಲ್ಲಿ ನೆರವಾದರು. ಚಿರಾಗ್ ಆರೋಗ್ಯವಾಗಿದ್ದಾರೆ. ಮಾನಸಿಕ ಒತ್ತಡ ಫಲವಾಗಿ ಅವರಿಗೆ ಡಿಹೈಡ್ರೇಶನ್ ಆಗಿದೆ. ಕೆಲವು ಗಂಟೆಗಳಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಮೂವತ್ತೇಳು ವರ್ಷದ ಚಿರಾಗ್ ತಂದೆಯನ್ನು ಬಹಳ ಹಚ್ಚಿಕೊಂಡಿದ್ದರು. ಅಷ್ಟೇ ಅಲ್ಲ, ರಾಷ್ಟ್ರಮಟ್ಟದ ಲಾಕ್ಡೌನ್ ಆಗಿದ್ದಾಗ ತಂದೆಯ ಕೂದಲು ಕತ್ತರಿಸುವ ಕೆಲಸವನ್ನೂ ಮಾಡಿ ದೇಶದ ಗಮನಸೆಳೆದಿದ್ದರು. ತಂದೆಯ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದ ಚಿರಾಗ್, ಇತ್ತೀಚೆಗೆ ಬಿಹಾರ ಚುನಾವಣೆ ಘೋಷಣೆಯಾದ ಬೆನ್ನಿಗೆ ಎನ್ಡಿಎ ಮೈತ್ರಿಯಿಂದ ಹೊರಬಂದು ಜೆಡಿಯು ವಿರುದ್ಧ ಎಲ್ಜೆಪಿ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ಘೋಷಿಸಿ ಎಲ್ಲರನ್ನೂ ದಂಗುಬಡಿಸಿದ್ದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಚಿರಾಗ್, ಒಂಟಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದರು.
ಇಷ್ಟಾಗ್ಯೂ, ರಾಜಕೀಯ ದ್ವೇಷದ ಹೊರತಾಗಿಯೂ ನಿತೀಶ್ ಕುಮಾರ್ ಇಂದು ರಾಮವಿಲಾಸ್ ಪಾಸ್ವಾನ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ರಾಮವಿಲಾಸ್ ಪಾಸ್ವಾನ್ ಅವರು ಅಕ್ಟೋಬರ್ 8ರಂದು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅಸ್ತಂಗತರಾಗಿದ್ದರು. (ಏಜೆನ್ಸೀಸ್)