

ಟೋಕಿಯೊ: ಜಪಾನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಶಿಂಜೋ ಅಬೆ ಉತ್ತರಾಧಿಕಾರಿಯಾಗಿ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್ಡಿಪಿ) ನಾಯಕ ಯೋಷಿಹಿಡೆ ಸುಗಾ ಆಯ್ಕೆಯಾಗಿದ್ದಾರೆ. ಅಧಿಕಾರಾರೂಢ ಎಲ್ಡಿಪಿ ಪಕ್ಷದ ಮುಖ್ಯಸ್ಥರಾಗಿ ಸೋಮವಾರ ಆಯ್ಕೆಯಾದ ಸುಗಾ, ದೇಶದ ಮುಂದಿನ ಪ್ರಧಾನಿಯಾಗುವುದು ಖಚಿತವಾಗಿದೆ. ಅಬೆ ಉತ್ತರಾಧಿಕಾರಿಯ ಆಯ್ಕೆಗೆ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸುಗಾ 377 ಮತಗಳನ್ನು ಪಡೆದರು. ಇತರ ಇಬ್ಬರು ಆಕಾಂಕ್ಷಿಗಳು ಒಟ್ಟಿಗೆ 157 ಮತಗಳನ್ನು ಗಳಿಸಿದರು. ಅನಾರೋಗ್ಯದ ಕಾರಣ ಪ್ರಧಾನಿ ಸ್ಥಾನದಿಂದ ನಿರ್ಗಮಿಸುವುದಾಗಿ ಅಬೆ ಕಳೆದ ತಿಂಗಳು ಪ್ರಕಟಿಸಿದ್ದರು.
ಯೋಷಿಹಿಡೆ ಸುಗಾ (71) ಉತ್ತರ ಜಪಾನ್ನ ಗ್ರಾಮೀಣ ಭಾಗವೊಂದರ ರೈತ ಹಾಗೂ ಶಿಕ್ಷಕಿ ದಂಪತಿಯ ಪುತ್ರ. ಇವರಿಗೆ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲ. ಸ್ವತಃ ಅವರು ಸ್ಟ್ರಾಬೆರಿ ಬೆಳೆಗಾರ. ಅಬೆಯವರ ಬಲಗೈ ಬಂಟ ಎಂದು ಖ್ಯಾತರಾಗಿರುವ ಸುಗಾ, ಸೌಮ್ಯ ವ್ಯಕ್ತಿತ್ವದವರು. ಆದರೂ ಕಠಿಣ ನಿರ್ಧಾರ ತಳೆದು ಸಾಧಿಸುವ ಛಲಗಾರ. ಪ್ರಧಾನ ಮಂತ್ರಿ ಕಚೇರಿಯ ಕೇಂದ್ರೀಕೃತ ಅಧಿಕಾರದ ಪ್ರಭಾವ ಬಳಸಿ ಅಧಿಕಾರಶಾಹಿ ಮೇಲೆ ಹಿಡಿತ ಸಾಧಿಸಿದ್ದಾರೆ. ಆಡಳಿತಶಾಹಿಯ ಪ್ರಾದೇಶಿಕ ಅಡೆತಡೆಗಳನ್ನು ಮುರಿದು ನೀತಿಗಳ ಅನುಷ್ಠಾನಕ್ಕೆ ತಾನು ಕೆಲಸ ಮಾಡಿರುವುದಾಗಿ ಸ್ವತಃ ಸುಗಾ ಹೇಳಿ ಕೊಂಡಿದ್ದಾರೆ. ಜಪಾನ್ನಲ್ಲಿ ವಿದೇಶಿ ಪ್ರವಾಸೋದ್ಯಮ ಹೆಚ್ಚಳ, ಸೆಲ್ಫೋನ್ ಬಿಲ್ಗಳ ಕಡಿತ, ಕೃಷಿ ರಫ್ತು ಹೆಚ್ಚಳ ಸಾಧಿಸಿದ ಶ್ರೇಯಸ್ಸು ಸುಗಾರಿಗೆ ಸಲ್ಲುತ್ತದೆ.
ಸರಳ ವಿತ್ತೀಯ ನೀತಿ ಅನುಸರಿಸಲಾಗುವುದು. ಸರ್ಕಾರದ ಖರ್ಚುವೆಚ್ಚ ನಿಯಂತ್ರಣ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಅಬೆ ಅವರು ಅನುಸರಿಸುತ್ತಿದ್ದ ನೀತಿಗಳನ್ನು ಪಾಲಿಸಲಾಗುವುದು. ಅಮೆರಿಕದೊಂದಿಗಿನ ರಕ್ಷಣಾ ಮೈತ್ರಿಯಲ್ಲಿ ರಾಜತಾಂತ್ರಿಕ ಕೇಂದ್ರೀತ ನಿಲುವು ಅನುಸರಿಸಲಾಗುವುದು. | ಯೋಷಿಹಿಡೆ ಸುಗಾ ಎಲ್ಡಿಪಿ ನಾಯಕ