ಮಗು ಮನೆಯಲ್ಲೇ ಬಿಟ್ಟು ಲವರ್​ ನೋಡಲು ಹೋದ ತಾಯಿ: ಮರಳಿ ಬಂದವಳಿಗೆ ಕಾದಿತ್ತು ಭಾರಿ ಶಾಕ್​!

Child
Published on

ಟೊಕಿಯೋ: ತನ್ನ ಬಾಯ್​ಫ್ರೆಂಡ್​ ನೋಡಲು ಮೂರು ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಹೋದ ತಾಯಿ ಮರಳಿ ಬರುವಷ್ಟರಲ್ಲಿ ಮಗು ಹಸಿವಿನಿಂದ ಅಸುನೀಗಿರುವ ಅಮಾನವೀಯ ಘಟನೆ ದೂರದ ಜಪಾನ್​ನಲ್ಲಿ ನಡೆದಿದೆ.

ಜಪಾನ್​ ರಾಜಧಾನಿ ಟೊಕಿಯೋ ನಿವಾಸಿ ಸಕಿ ಕಕಿಹಸಿ (24) 600 ಮೈಲಿ ದೂರದಲ್ಲಿರುವ ಬಾಯ್​ಫ್ರೆಂಡ್​ ನೋಡುವ ಆಸೆಗೆ ತನ್ನ ಮಗಳಾದ ನೊಹಾಳನ್ನೇ ಬಲಿ ಪಡೆದುಕೊಂಡಿದ್ದಾಳೆ. ಮಗು ಗಂಭೀರವಾದ ನಿರ್ಜಲೀಕರಣ ಮತ್ತು ಹಸಿವಿನಿಂದ ಮೃತಪಟ್ಟಿರುವುದಾಗಿ ಜಪಾನ್​ ಪೊಲೀಸರು ತಿಳಿಸಿದ್ದಾರೆ.

ಮೊದಲೇ ವಿಚ್ಛೇದನ ಪಡೆದಿದ್ದ ತಾಯಿ ಮಗುವನ್ನು ಒಟಾ ನಗರದ ಅಪಾರ್ಟ್​ಮೆಂಟ್​ನಲ್ಲಿ ಬಿಟ್ಟು ಹೊರಡಲು ಇದೇ ಒಳ್ಳೆಯ ಸಮಯವೆಂದು ತಿಳಿದು, ಜಪಾನ್​ನ ಕ್ಯುಶು ದ್ವೀಪದ ಕಾಗೋಶಿಮಾ ಪ್ರಾಂತ್ಯದಲ್ಲಿರುವ ತನ್ನ ಲವರ್​ ಭೇಟಿ ಮಾಡಲು ತೆರಳಿದ್ದಾಳೆ. ಅಂದಹಾಗೆ ಜಪಾನ್​ನ ದಕ್ಷಿಣದ ಅತ್ಯಂತ ತುತ್ತ ತುದಿಯಾಗಿರುವ ಕ್ಯುಶು ದ್ವೀಪಕ್ಕೆ ತೆರಳಲು ಅಂದಾಜು ಎರಡು ಗಂಟೆ ವಿಮಾನ ಪ್ರಯಾಣ ಬೇಕು.

ಮಗುವನ್ನು ಒಂಟಿಯಾಗಿ ಬಿಟ್ಟು ಹೋಗಲು ತಾಯಿಗೆ ಹೇಗಾದರೂ ಮನಸ್ಸು ಬಂತೋ? ಅಥವಾ ಹೋಗಿ ಬಾಯ್​ಫ್ರೆಂಡ್​ ಭೇಟಿ ಮಾಡಿ ಆದಷ್ಟು ಬೇಗ ಬಂದಿದ್ದರೆ ಮಗುವಿನ ಜೀವವಾದ್ರೂ ಉಳಿಯುತ್ತಿತ್ತು. ಉದ್ದೇಶ ಪೂರ್ವಕವಾಗಿ ಮಾಡಿದಳೋ ಅಥವಾ ತಿಳಿಯದೇ ಮಾಡಿದಳೋ ಬರೋಬ್ಬರಿ 8 ದಿನಗಳ ಬಳಿಕ ಮನೆಗೆ ಮರಳಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ಮಗು ಹಸಿವಿನಿಂದ ಕೊನೆಯುಸಿರೆಳೆದಿದೆ.

ಕಕೆಹಸಿಯನ್ನು ಮಂಗಳವಾರ ಬಂಧಿಸಲಾಯಿತು. ಜೂನ್​ 8ರಂದು ಮನೆಗೆ ಮರಳಿದ ಆಕೆ ಮಗು ಪ್ರಜ್ಞೆ ಇಲ್ಲದೇ ಅಪಾರ್ಟ್​ಮೆಂಟ್​ನಲ್ಲಿ ಬಿದ್ದಿರುವುದನ್ನು ನೋಡಿದ್ದಾಳೆ. ತಕ್ಷಣ ತುರ್ತುಸೇವೆಗೆ ಕರೆ ಮಾಡಿ, ನೋಹಾ ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾಳೆ. ಅನೇಕ ದಿನಗಳಿಂದ ಮಗುವಿನ ನಾಪ್ಕಿನ್​ ಬದಲಾವಣೆ ಮಾಡದಿದ್ದರಿ ಮಗುವಿನ ಕೆಳಮೈಯಲ್ಲಿ ಗುಳ್ಳೆಗಳ ರೀತಿಯ ಗಾಯಗಳಾಗಿರುವುದು ಕಂಡುಬಂದಿದೆ. ಅಲ್ಲದೆ, ಅಪಾರ್ಟ್ಮೆಂಟ್ ಕೂಡ ಕಸದ ರಾಶಿಯಿಂದ ತುಂಬಿತ್ತು.

ಮಗು ಸಾವಿಗೀಡಾಗಿರುವ ಬಗ್ಗೆ ದೃಢವಾದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಗುವಿನ ಹೊಟ್ಟೆ ಖಾಲಿ ಇದ್ದುದ್ದು ತಿಳಿದುಬಂದಿದೆ. ಅಲ್ಲದೆ, ಮಗು ಥೈಮಿಕ್​ ಅಟ್ರೋಫೈ ಎಂಬ ಮಕ್ಕಳ ದೌರ್ಜನ್ಯದಂತಹ ವಿಲಕ್ಷಣತೆಯಿಂದ ಬಳಲಿರುವುದು ಗೊತ್ತಾಗಿದೆ.

ಈ ಬಗ್ಗೆ ಕಕೆಹಸಿಯನ್ನು ಪ್ರಶ್ನಿಸಿದಾಗ ಮಗು ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿತ್ತು. ಅವಳಿಗೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣವಿರಲಿಲ್ಲ ಎಂದಿದ್ದಾಳೆ. ಆದರೆ, ಪೊಲೀಸರು ಅನುಮಾನಗೊಂಡು ಮತ್ತಷ್ಟು ಪ್ರಕರಣವನ್ನು ಕೆದಕಿದಾಗ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net