

ಕಡೂರು: ನೈತಿಕ ಮೌಲ್ಯ ಸಾರುವ ಜಾನಪದ ಚೌಡಕಿ ಮೇಳವು ಆಧುನಿಕ ಪಾಶ್ಚತ್ಯ ಸಂಗೀತದ ಹಾವಳಿಯಿಂದ ಮೂಲೆಗುಂಪಾಗುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಬೇಸರ ವ್ಯಕ್ತಪಡಿಸಿದರು.
ಅಜ್ಜಂಪುರ ತಾಲೂಕು ಅಣ್ಣಾಪುರ ಗ್ರಾಮದ ಶಿವಕುಮಾರ್ ನಿವಾಸದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಶುಕ್ರವಾರ ಏರ್ಪಡಿಸಿದ್ದ ಸಿರಿದೇವಿ ಸತ್ವ ಪರೀಕ್ಷೆಯ ಜಾನಪದ ಚೌಡಿಕೆ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಕಲೆಗಳ ತಾಯಿಬೇರು ಜಾನಪದ. ಇವುಗಳನ್ನು ಮರೆತಿರುವ ಕಾರಣ ಅರ್ಥಗರ್ಭಿತವಲ್ಲದ ಸಂಗೀತ ಕೇಳುವ ಸ್ಥಿತಿಗೆ ತಲುಪಿದ್ದೇವೆ ಎಂದು ವಿಷಾದಿಸಿದರು.
ಸಾಹಿತಿ ತ್ಯಾಗದಕಟ್ಟೆ ತಿಪ್ಪೇಶಪ್ಪ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಸಿರಿದೇವಿ ಸತ್ವ ಪರೀಕ್ಷೆಯಂತಹ ಅನೇಕ ಚೌಡಿಕೆ ಕಥೆಗಳನ್ನು ನಮ್ಮ ಜನಪದರು ಹುಟ್ಟುಹಾಕಿದರು ಎಂದರು.
ಹಿರಿಯ ಜಾನಪದ ಕಲಾವಿದರನ್ನು ಗೌರವಿಸಲಾಯಿತು. ಸೋಲ್ಲಾಪುರದ ಜಯಣ್ಣ ಮತ್ತು ತಂಡ ಚೌಡಿಕೆ ಮೇಳ ನಡೆಸಿಕೊಟ್ಟರು.
ಅಜ್ಜಂಪುರ ತಾಲೂಕು ಕಜಾಪ ಅಧ್ಯಕ್ಷ ಡಾ. ಮಾಳೇನಳ್ಳಿ ಬಸಪ್ಪ, ಎಲ್‌ಐಸಿ ಶಿವಕುಮಾರ, ತ್ಯಾಗದಕಟ್ಟೆ ಪ್ರಕಾಶ್, ಕರ್ನಾಟಕ ಜಾನಪದ ಪರಿಷತ್ ಉಪಾಧ್ಯಕ್ಷ ಜಿ.ಎಸ್.ತಿಪ್ಪೇಶ್, ಗೌರವಾಧ್ಯಕ್ಷ ಮರಳಸಿದ್ದಪ್ಪ, ಕಲಾವಿದರಾದ ಚಿಕ್ಕನಲ್ಲೂರು ಜಯಣ್ಣ, ಚಿಕ್ಕನಲ್ಲೂರು ತಿಪ್ಪೇಶ, ನಾರಾಯಣಪುರ ರಾಜಣ್ಣ, ರತ್ನಗಿರಿ ಗೌಡ, ರಾಮಚಂದ್ರಪ್ಪ, ಶಂಕ್ರಪ್ಪ, ತಿಪ್ಪೇಶಪ್ಪ, ದೇವರಾಜು, ಮೋಹನ್ ಕುಮಾರ್, ಯಶ್ವಂತ್ ಇತರರಿದ್ದರು.