ಜಯಪುರ ಪಿಎಚ್‌ಸಿ ಕಿಷ್ಕಿಂಧೆ

phc
ಸಣ್ಣ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರ.
Published on

ಜಯಪುರ: ಶಂಕುಸ್ಥಾಪನೆಯಾಗಿ 5 ತಿಂಗಳು ಕಳೆದರೂ ಜಯಪುರದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕೆಲಸ ಇನ್ನೂ ಆರಂಭವಾಗದೆ ಮೇಗುಂದಾ ಹೋಬಳಿ ವ್ಯಾಪ್ತಿಯ ಹಳ್ಳಿಗಳ ಬಡ ರೋಗಿಗಳು ಪರದಾಡುವಂತಾಗಿದೆ.

ಹೊಸ ಕಟ್ಟಡ ನಿರ್ಮಾಣದ ನೆಪದಲ್ಲಿ ತರಾತುರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹಳೇ ಕಟ್ಟಡದಿಂದ ಸಣ್ಣ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಗಿದೆ. ಅತ್ತ ಹಳೆ ಆಸ್ಪತ್ರೆಯೂ ಇಲ್ಲ, ಇತ್ತ ಹೊಸ ಆಸ್ಪತ್ರೆಯೂ ಇಲ್ಲದಂತಾಗಿ ರೋಗಿಗಳಿಗೆ ತೊಂದರೆಯಾಗಿದೆ.
4 ತಿಂಗಳಿನಿಂದ ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಸರ್ಕಾರದ ಈ ನಡೆಗೆ ಗ್ರಾಮಸ್ಥರು ಬೇಸರಗೊಂಡಿದ್ದು ಕೂಡಲೇ ಕಾಮಗಾರಿ ಆರಂಭಿಸಲು ಒತ್ತಾಯಿಸಿದ್ದಾರೆ.
ಮೇಗುಂದಾ ಹೋಬಳಿಯ ಕೇಂದ್ರ ಸ್ಥಾನ ಜಯಪುರದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿ 2022ರ ನವೆಂಬರ್‌ನಲ್ಲಿ ಹಿಂದಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕಟ್ಟಡ ಸೇರಿ ಇತರೆ ಮೂಲ ಸೌಲಭ್ಯ ಕಲ್ಪಿಸಲು 12.48 ಕೋಟಿ ರೂ. ಅನುದಾನ ನೀಡಿತ್ತು.
ಶಾಸಕ ರಾಜೇಗೌಡ ಹಾಗೂ ಆರೋಗ್ಯ ಇಲಾಖೆ ಆಸ್ಪತ್ರೆ ನಿರ್ಮಾಣಕ್ಕೆ 2023ರ ಮಾರ್ಚ್ 17ರಂದು ಗುದ್ದಲಿಪೂಜೆ ನೆರವೇರಿಸಿದ್ದಲ್ಲದೆ ಸುಸಜ್ಜಿತ ಆಸ್ಪತ್ರೆ ಶೀಘ್ರ ನಿರ್ಮಿಸುವುದಾಗಿ ತಿಳಿಸಿದ್ದರು. ನಂತರ ಶಾಸಕರು ಹಾಗೂ ಅಧಿಕಾರಿಗಳು ಆಸಕ್ತಿ ತೋರದ ಕಾರಣ ಹೊಸ ಆಸ್ಪತ್ರೆ ನಿರ್ಮಾಣ ಕಾರ್ಯ ನನೆಗುದಿಗೆಗೆ ಬಿದ್ದಿದೆ.
ಬಡ ಕೂಲಿ ಕಾರ್ಮಿಕರೇ ಹೆಚ್ಚು: ಗುಡ್ಡಗಾಡು ಪ್ರದೇಶ ಹಾಗೂ ಬಹುತೇಕ ಬಡ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳೇ ವಾಸಿಸುತ್ತಿರುವ ಹೋಬಳಿಯಲ್ಲಿ ಜಯಪುರ, ಹೇರೂರು, ಅತ್ತಿಕುಡಿಗೆ, ಗುಡ್ಡೇತೋಟ, ಅಗಳಗಂಡಿ ಹಾಗೂ ಹಿರೇಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಒಳರೋಗಿಗಳಾಗಿ ದಾಖಲಾಗಲು ಇದ್ದ ಏಕೈಕ ಸರ್ಕಾರಿ ಆಸ್ಪತ್ರೆ ಜಯಪುರದ ಸಾರ್ವಜನಿಕ ಆಸ್ಪತ್ರೆ. ಇಂತಹ ಆರೋಗ್ಯ ಕೇಂದ್ರವನ್ನು ಸರಿಯಾದ ವ್ಯವಸ್ಥೆ ಮಾಡದೆ ಸಣ್ಣ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವುದರಿಂದ ರೋಗಿಗಳು ಒಳ ರೋಗಿಗಳಾಗಿ ದಾಖಲಾಗಲು ಸಾಧ್ಯವಾಗುತ್ತಿಲ್ಲ. ದೂರದ ಕೊಪ್ಪ, ಶೃಂಗೇರಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುವಂತಾಗಿದೆ.
ಗ್ಯಾರೇಜಿನಲ್ಲಿದೆ ಆಂಬುಲೆನ್ಸ್: ಬಸರೀಕಟ್ಟೆ ಹಾಗೂ ಕೊಗ್ರೆಯಲ್ಲಿ ಎರಡು ಸರ್ಕಾರಿ ಆಸ್ಪತ್ರೆಗಳಿದ್ದರೂ ಅವುಗಳಲ್ಲಿ ಕಾಯಂ ವೈದ್ಯರಿಲ್ಲ. ಈಗ ಸ್ಥಳಾಂತರ ಮಾಡಿರುವ ಕಟ್ಟಡದಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಥಳಾವಕಾಶದ ಕೊರತೆಯಿದೆ. ಒಳ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೆರಿಗೆಗೆ ಬರುವ ಸ್ತ್ರೀಯರಿಗೆ, ಮಹಿಳೆಯರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಹೋಬಳಿ ವ್ಯಾಪ್ತಿಯಲ್ಲಿ ಹಾದು ಹೋಗುವ ಚಿಕ್ಕಮಗಳೂರು-ಬೈಂದೂರು ಸಂಪರ್ಕದ ರಾಜ್ಯ ಹೆದ್ದಾರಿಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ದೂರದ ಶೃಂಗೇರಿ ಹಾಗೂ ಕೊಪ್ಪದ ಆಸ್ಪತ್ರೆಗೆ ಸಾಗಿಸಬೇಕಾಗಿದೆ. ಇದಕ್ಕೆ ಅಗತ್ಯ ಆಂಬುಲೆನ್ಸ್ ಜಯಪುರದಲ್ಲಿ ಇಲ್ಲ. ಜಯಪುರ ಆಸ್ಪತ್ರೆಯ ಆಂಬುಲೆನ್ಸ್ ಕೆಲಸ ಮಾಡಿದ್ದಕ್ಕಿಂತ ಗ್ಯಾರೇಜ್‌ನಲ್ಲಿ ನಿಂತಿದ್ದೇ ಹೆಚ್ಚು. ಈಗಲೂ ಹಾಳಾಗಿ ಗ್ಯಾರೇಜಿನಲ್ಲಿ ನಿಂತಿದೆ.
108 ವಾಹನ ಒದಗಿಸಿ: ಜಯಪುರದಲ್ಲಿ 108 ಆಂಬುಲೆನ್ಸ್ ಇಲ್ಲ. ತುರ್ತು ಸಂದರ್ಭದಲ್ಲಿ ದೂರದ ಕೊಪ್ಪ, ಶೃಂಗೇರಿಯಿಂದ ಬರಬೇಕಾಗಿದೆ. ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ತುರ್ತು ಚಿಕಿತ್ಸೆ ಸಿಗದೆ ರೋಗಿಗಳು ಸಾವಿಗೀಡಾಗುವ ಸಂಭವ ಹೆಚ್ಚಾಗಿದೆ. ಒಳ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ವಿಸ್ತಾರವಾದ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಿಸಬೇಕು. ಜಯಪುರಕ್ಕೆ ಆಸ್ಪತ್ರೆಗೆ 108 ಆಂಬುಲೆನ್ಸ್ ವಾಹನ ನೀಡಲು ಸರ್ಕಾರ ಕ್ರಮವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಹಳೇ ಆಸ್ಪತ್ರೆ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ ಪ್ರಾರಂಭಿಸಲು ಹಾಗೂ ಹೊಸ ಆಸ್ಪತ್ರೆ ನಿರ್ಮಾಣ ಪೂರ್ಣಗೊಳ್ಳುವವರೆಗೆ ಆಸ್ಪತ್ರೆಯನ್ನು ವಿಸ್ತಾರವಾದ ಬಾಡಿಗೆ ಅಥವಾ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಕ್ರಮ ವಹಿಸಲಾಗುವುದು. ಹಾಳಾಗಿರುವ ಆಂಬುಲೆನ್ಸ್ ಕೂಡಲೇ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡಲು ಆಡಳಿತ ವೈದ್ಯಾಧಿಕಾರಿಗೆ ಆದೇಶಿಸುತ್ತೇನೆ ಎಂದು ಡಿಎಚ್‌ಒ ಡಾ. ಅಶ್ವತ್ಥ್‌ಬಾಬು ವಿಜಯವಾಣಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net