ಜೈಲಿನಲ್ಲಿ ಗಾಂಜಾ, ಮೊಬೈಲ್ : ಕೈದಿಗಳ ಬಳಿಯಿದ್ದ 54 ಸಾವಿರ ರೂ., 6 ಸಿಮ್ ವಶ ಎಸ್‌ಪಿ ನೇತೃತ್ವದಲ್ಲಿ ದಾಳಿ

30-03-rama-jail
Published on

 ರಾಮನಗರ :  ಜಿಲ್ಲಾ ಕಾರಾಗೃಹದ ಮೇಲೆ ದಾಳಿ ನಡೆಸಿರುವ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ನೇತೃತ್ವದ ತಂಡ, ಕೈದಿಗಳ ಬಳಿಯಿದ್ದ ಹಣ, ಮೊಬೈಲ್, ಮಾದಕ ವಸ್ತುಗಳು ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ 50 ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡ ದಿಢೀರ್ ಜಿಲ್ಲಾ ಕಾರಾಗೃಹದ ಮೇಲೆ ದಾಳಿ ನಡೆಸಿತು. ಈ ವೇಳೆ ವಿಚಾರಣಾಧೀನ ಖೈದಿಗಳ ಬಳಿ ಇದ್ದ ಅಪಾರ ಪ್ರಮಾಣದ ಹಣ, ಮೊಬೈಲ್‌ಗಳು, ಗಾಂಜಾ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು.

ದಾಳಿ ನಂತರ ಮಾಹಿತಿ ನೀಡಿದ ಎಸ್‌ಪಿ ಎಸ್. ಗಿರೀಶ್, ಆಗಾಗ ಜೈಲುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಆದರೆ, ಮಂಗಳವಾರ ದಿಢೀರ್ ದಾಳಿ ನಡೆಸಿದ ವೇಳೆ 54 ಸಾವಿರ ರೂ., 5 ಮೊಬೈಲ್‌ಗಳು, 6 ಸಿಮ್‌ಗಳು, 60ಕ್ಕೂ ಹೆಚ್ಚು ಸಿಗರೇಟ್ ಪ್ಯಾಕೇಟ್‌ಗಳು, ಗುಟ್ಖಾ, ಗಾಂಜಾ, ಚಾಕು ಮತ್ತಿತರ ವಸ್ತುಗಳು ದೊರೆತಿವೆ ಎಂದು ತಿಳಿಸಿದರು. ಅಲ್ಲದೆ, ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದರು.

ಸುಧಾರಣೆಗಾಗಿ ಅಪರಾಧಿಗಳು ಮತ್ತು ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗುತ್ತದೆ. ಜೈಲಿನಲ್ಲಿ ಇರುವಷ್ಟು ದಿನ ಬಾಹ್ಯ ಜಗತ್ತಿನ ಸಂಪರ್ಕ ದೊರೆಯಬಾರದು ಎನ್ನುವ ಕಾರಣಕ್ಕೆ ಎಲ್ಲ ಸೌಲಭ್ಯಗಳನ್ನು ರದ್ದುಗೊಳಿಸಲಾಗುತ್ತದೆ. ಆದರೆ, ರಾಮನಗರ ಜೈಲೂ ಸೇರಿದಂತೆ ಬಹುತೇಕ ಎಲ್ಲ ಕಾರಾಗೃಹಗಳಲ್ಲಿ ಕೈದಿಗಳು ಹೊರಗಿನಂತೆಯೇ ಜೀವನ ನಡೆಸುತ್ತಿದ್ದು, ಎಲ್ಲ ಸೌಲಭ್ಯಗಳು ದೊರೆಯುತ್ತಿವೆ ಎನ್ನುವುದಕ್ಕೆ ಮಂಗಳವಾರ ಎಸ್‌ಪಿ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಪತ್ತೆಯಾದ ವಸ್ತುಗಳೇ ಸಾಕ್ಷಿಯಾಗಿವೆ.

ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲವಾದರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬರುವ ಆರೋಪಿ ಅಥವಾ ಅಪರಾಧಿ ರಾಜಾರೋಷವಾಗಿ ಜೈಲಿನಲ್ಲಿಯೂ ಬದುಕು ಸಾಗಿಸುವಂತೆ ಅಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net