

ಯಾವತ್ ಸ್ಥಾಸ್ಯಂತಿ ಗಿರಯಃ
ಸರಿತಶ್ಚ ಮಹೀತಳೇ|
ತಾವತ್ ರಾಮಾಯಣಕಥಾ
ಲೋಕೇಷು ಪ್ರಚರಿಷ್ಯತಿ||
ಬೆಟ್ಟಗಳು ತಲೆಯೆತ್ತಿ ನಿಂತಿರುವವರೆಗೆ, ನದಿಗಳು ಹರಿಯುತ್ತಲೇ ಇರುವ ತನಕವೂ ರಾಮಾಯಣದ ಕಥೆಯು ಲೋಕದಲ್ಲಿ ತಿರುಗಾಡುತ್ತಿರುತ್ತದೆ.
ರಾಮನ ಕಥೆ ತಿರುಗುತ್ತಲೇ ಇದೆ ಎಂಬ ಮಾತು ಇವತ್ತು ನಮ್ಮ ಕಣ್ಣ ಮುಂದೆ ಸ್ಪಷ್ಟವಾಗಿದೆ. ನಂಬುವವರೆಗೂ ನಂಬದವರಿಗೂ ರಾಮನೇ ದಿಕ್ಕಾಗಿದ್ದಾನೆ. ವಾಲ್ಮೀಕಿ ರಾಮಾಯಣ ಎಂಬ ದೇಸಿಹಸು ಎಲ್ಲ ಕವಿಗಳಿಗೂ, ನಾಟಕಕಾರರಿಗೂ, ನಾಟ್ಯ ವಿಶಾರದರಿಗೂ, ಯಕ್ಷಗಾನ ಕಲಾವಿದರಿಗೂ, ಜನಪದ ಸಾಹಿತಿಗಳಿಗೂ, ಕಾದಂಬರಿಕಾರರಿಗೂ, ನಾಣ್ಣುಡಿಯ ಪ್ರಪಂಚಕ್ಕೂ, ಚಲಚಿತ್ರರಂಗಕ್ಕೂ, ದಾಸಸಾಹಿತ್ಯಕ್ಕೂ, ವಿಮರ್ಶಕರಿಗೂ ಜೀವ ಕೊಡುವ ಹಾಲನ್ನು ನೀಡುತ್ತಲೇ ಬಂದಿದೆ. 13ನೇ ಶತಮಾನದ ಸಂಗ್ರಹ ರಾಮಾಯಣಕಾರ ನಾರಾಯಣಪಂಡಿತಾಚಾರ್ಯರ ಈ ಮಾತು ಮನನೀಯ.
ವಾಲ್ಮೀಕೇರ್ಗೌಃ ಪುನೀಯಾನ್ನಃ ಮಹೀಧರಪದಾಶ್ರಯಾ|
ಯದ್ದುಗ್ಧಮುಪಜೀವಂತಿ ಕವಯಃ ತರ್ಣಕಾ ಇವ||
ಈ ರಾಮಾಯಣ ವಾಲ್ಮೀಕಿಗಳು ಸಾಕಿದ ನಾಡಹಸು. ಶ್ರೀರಾಜಾರಾಮನೆಂಬ ಹೆಬ್ಬೆಟ್ಟದ ತಪ್ಪಲಿನಲ್ಲಿ ಮೇಯುವ ಹಸು. ಕೊಡ ತುಂಬ ಬತ್ತದ, ರುಚಿಯಾದ ಹಾಲು ಕೊಡುವ ಹಸು. ಈ ಹಸುವಿನ ಹಾಲುಂಡು ಬದುಕುವ ಕರುಗಳು ಜಗದಗಲಕ್ಕೂ ವ್ಯಾಪಿಸಿಕೊಂಡಿರುವ ಸಹಸ್ರಾರು ಕವಿಗಳು. ಇಂತಹ ಮುಪ್ಪೊದಗದ ರಾಮಾಯಣದ ಹಸು ನಮ್ಮೆಲ್ಲರನ್ನೂ ಪವಿತ್ರೀಕರಿಸಲಿ.
ರಾಮಾಯಣದ ಕುರಿತಾಗಿ ಸಂಸ್ಕೃತ ಸಾಹಿತ್ಯ ಒಂದರಲ್ಲಿಯೇ ಹೊಳೆಯಂತೆ ನೂರಾರು ಪ್ರತಿಕ್ರಿಯೆಗಳು ಮೂಡಿವೆ. ಅದರಂತೆಯೇ ಹಿಂದಿ, ಅವಧ್, ಮರಾಠಿ, ಕನ್ನಡ, ಬಾಂಗ್ಲಾ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಗುಜರಾತಿ, ಪಂಜಾಬಿ ಹೀಗೆ ಹಲವು ಭಾಷೆಗಳ ಹಲವು ಪ್ರಕಾರಗಳಲ್ಲಿ ರಾಮಾಯಣ ರೂಪಾಂತರಗೊಂಡಿದೆ.
ವ್ಯಾಸ ಭಾರತದ ವನಪರ್ವದಲ್ಲಿ ಧರ್ಮರಾಜನಿಗೆ ಉಂಟಾದ ದ್ರೌಪದಿಯ ವಿರಹವೇದನೆಯನ್ನು ಪರಿಹರಿಸಲು ರಾಮೋಪಾಖ್ಯಾನಪರ್ವ ಮೂಡಿಬಂದಿದೆ. ಮತ್ತೆ ವ್ಯಾಸರೇ ಹದಿನೆಂಟು ಪುರಾಣಗಳಲ್ಲಿಯೂ ಈ ರಾಮನ ಕಥೆಯನ್ನು ಕೆಲವೆಡೆ ವಿಸ್ತಾರವಾಗಿಯೂ, ಇನ್ನು ಕೆಲವೆಡೆ ಸಂಕ್ಷಿಪ್ತವಾಗಿಯೂ ಕಟ್ಟಿಕೊಟ್ಟಿದ್ದಾರೆ. ಸಂಗ್ರಹರಾಮಾಯಣ, ಮಧ್ವರಾಮಾಯಣ, ಆನಂದರಾಮಾಯಣ, ಅದ್ಭುತರಾಮಾಯಣ, ಆರ್ಷರಾಮಾಯಣ, ತತ್ವಾರ್ಥರಾಮಾಯಣ, ಮಂತ್ರರಾಮಾಯಣ, ಸರ್ವಾರ್ಥರಾಮಾಯಣ, ಭಾವಾರ್ಥರಾಮಾಯಣ, ಪ್ರೇಮರಾಮಾಯಣ, ಕೃತ್ತಿವಾಸರಾಮಾಯಣ, ಸಂಜೀವಿನಿರಾಮಾಯಣ, ರಾಧೇಶ್ಯಾಮರಾಮಾಯಣ, ಶೈವರಾಮಾಯಣ, ಅಗಸ್ತಯ ವಸಿಷ್ಠರಾಮಾಯಣ, ಅಧ್ಯಾತ್ಮರಾಮಾಯಣ, ಕಂಬರಾಮಾಯಣ, ತೊರವೇರಾಮಾಯಣ, ಮಂದಾರರಾಮಾಯಣ, ಬಾಲರಾಮಾಯಣ, ರಾಮಾಯಣಮಂಜರಿ, ಮೈಥಿಲರಾಮಾಯಣ, ರಾಮಸಂದೇಶ, ತುಳಸಿರಾಮಾಯಣ, ಆಶ್ಚರ್ಯಚೂಡಾಮಣಿ, ಮಹಾವೀರಚರಿತ, ಚಂಪೂರಾಮಾಯಣ, ರಾಘವಯಾದವೀಯ, ರಘುನಾಥವಿಜಯ, ರಘುವಂಶ, ಜಾನಕೀಹರಣ, ಉದಾರರಾಘವ, ಅರ್ನ್ಯಘರಾಘವ, ಪ್ರಸನ್ನರಾಘವ ವೈದೇಹೀಶವಿಲಾಸ, ರಾಘವಪಾಂಡವೀಯ, ವಾಸ್ತವರಾಮಾಯಣ, ರಾಮಚರಿತಾಮೃತ, ಭಾನುಭಕ್ತರಾಮಾಯಣ, ಜಗನ್ಮೋಹನರಾಮಾಯಣ, ಶತ್ರುಂಜಯರಾಮಾಯಣ, ಬಿಚಿತ್ರ ರಾಮಾಯಣ, ಮಾಧವಕಂದಳಿ, ರಾಮಪಟ್ಟಾಭಿಷೇಕ, ಕೌಶಿಕರಾಮಾಯಣ, ರಾಮಾಶ್ವಮೇಧ, ಅಭಿಶೇಕನಾಟಕ, ಶ್ರೀರಂಗನಾಥರಾಮಾಯಣಂ ಹೀಗೆ ರಾಮಾಯಣಗಳ ಪಟ್ಟಿ; ಬೆಳೆಯುತ್ತಲೇ ಇರುವ ಹನುಮಂತನ ಬಾಲದಂತೆ. ಹೇಳಿ ಮುಗಿಯದ್ದು.
ವಿದೇಶದಲ್ಲಿಯೂ ಇದರ ಪ್ರಭಾವ ಇಂದಿಗೂ ಗಾಢವಾಗಿ ಹಬ್ಬಿದೆ. ತಿಬ್ಬತಿರಾಮಾಯಣ, ತುರ್ಕಿಸ್ತಾನದ ಖೋತನಿರಾಮಾಯಣ, ಇಂಡೋನೇಷಿಯಾದ ಕಕಬಿರಾಮಾಯಣ, ಜಾವಾದ ಪಾತಾನಿರಾಮಕಥ, ರಾಮಕೆಲಿಂಗ, ಸೈರೀರಾಮ, ಸೇರತ್ರಾಮ, ಇಂಡೋಚೈನಾದ ರಾಮಕೀರ್ತಿ, ಖೈಮರ್ ರಾಮಾಯಣ, ಬರ್ವದ ಯೂತೋಕಿ ರಾಮಾಯಣ, ಥೈಲ್ಯಾಂಡಿನ ರಾಮಕಿಯೆನ, ಕಾಕವೀನರಾಮಾಯಣ ಹೀಗೆ ವಿಶ್ವಾದ್ಯಂತ ಇನ್ನೂ ಅನೇಕ ರಾಮ ಕಥೆಗಳು ಪ್ರಾದೇಶಿಕತೆಯೊಂದಿಗೆ ಬೆರೆತು ವಿಶ್ವಾದ್ಯಂತ ರಾಮನನ್ನು ನೆನಪಿನಲ್ಲಿ ಉಳಿಸಿವೆ. ಈ ಒಂದೊಂದು ರಾಮಾಯಣದ ಬಗ್ಗೆ ಮತ್ತೆ ನೂರಾರು ವ್ಯಾಖ್ಯಾನಗಳು, ವಿಮರ್ಶೆಗಳು, ಅನುವಾದಗಳು, ಪ್ರಬಂಧಗಳು ಮಂಡನೆಗೊಳ್ಳುತ್ತಲೇ ಇವೆ. ಇದರ ಜೊತೆಗೆ ಹಳ್ಳಿಗರ, ಕೃಷಿಕರ, ಗೋವಳರ, ಕಾಡುಜನರ ವಾಚಿಕ ಪ್ರಪಂಚದಲ್ಲಿಯೂ ರಾಮಕಥೆ ಅಚ್ಚೊತ್ತಿ ನಿಂತಿದೆ. ರಾಜಾರಾಮ ಅಯೋಧ್ಯೆಯಲ್ಲಿ ಪ್ರತಿಷ್ಠೆಗೊಳ್ಳುವುದೆಂದರೆ ಎಲ್ಲ ಪ್ರಾದೇಶಿಕ ರಾಮಾಯಣಗಳಿಗೂ ಜೀವತುಂಬುವುದೆಂದೇ ಅರ್ಥ. ಅಹಲ್ಯಾಶಿಲೆಯಂತೆ ಜಡವಾಗಿರುವ ಭಾರತಮಾತೆ ಈ ರಾಮ ಜೀವಾಮೃತದಿಂದ ನವಚೈತನ್ಯ ಪಡೆದು ಪೂರ್ವದ ಅಪೂರ್ವ ವೈಭವಕ್ಕೆ ಮರಳಲಿ ಎಂದು ಆಶಿಸೋಣ.
(ಲೇಖಕರು ಸಂಸ್ಕೃತ ಉಪನ್ಯಾಸಕರು)