ಜಗದೀಶ ಶೆಟ್ಟರ್ ಇಂದೇ ಕಾಂಗ್ರೆಸ್​ಗೆ ಸೇರ್ಪಡೆ..

Shettar Congress
Published on

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ತೀವ್ರ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್, ಪಕ್ಷವನ್ನೇ ತೊರೆಯಲಿದ್ದು, ಸೋಮವಾರವೇ ಕಾಂಗ್ರೆಸ್​ಗೆ ಸೇರ್ಪಡೆ ಆಗಲಿದ್ದಾರೆ!

ಶಾಸಕ ಸ್ಥಾನ ತೊರೆದು ಬೆಂಗಳೂರಿಗೆ ಬಂದಿದ್ದ ಶೆಟ್ಟರ್ ಜತೆ ಕಾಂಗ್ರೆಸ್​ನ ರಣದೀಪ್ ಸಿಂಗ್ ಸುರ್ಜೆವಾಲಾ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್​ನ ಪ್ರಮುಖ ನಾಯಕರು ಸುದೀರ್ಘ ಸಭೆ ನಡೆಸಿದ್ದರು. ಅಲ್ಲದೆ ಹಲವು ಅವಕಾಶಗಳನ್ನು ನೀಡಿ ಕಾಂಗ್ರೆಸ್​ಗೆ ಸೇರಿಸಿಕೊಳ್ಳುವ ಭರವಸೆಯನ್ನೂ ನೀಡಿದ್ದರಿಂದ ಶೆಟ್ಟರ್​ ಕಾಂಗ್ರೆಸ್​ಗೆ ಸೇರಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಬಿಜೆಪಿಯಲ್ಲೂ ಶೆಟ್ಟರ್ ವಿಚಾರವಾಗಿ ಸಭೆ ನಡೆದಿದ್ದು, ಗಂಭೀರ ಚರ್ಚೆ ನಡೆದಿತ್ತು. ಇವೆರಡೂ ಸಭೆಗಳ ಬಳಿಕ ಶೆಟ್ಟರ್ ನಾಳೆ ಬೆಳಗ್ಗೆ ತಮ್ಮ ನಿರ್ಧಾರ ಪ್ರಕಟಿಸಲಿರುವ ಮಾಹಿತಿ ಕೂಡ ಹೊರಬಿದ್ದಿದೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಬೆಳಗ್ಗೆ 8.15ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಹುತೇಕ ಇದೇ ಸುದ್ದಿಗೋಷ್ಠಿಯಲ್ಲಿ ಶೆಟ್ಟರ್ ಕಾಂಗ್ರೆಸ್​ ಸೇರ್ಪಡೆ ವಿಚಾರ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಆಪ್ತಮೂಲಗಳಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net