ಚಂದ್ರಯಾನ ಯಶಸ್ಸಿಗೆ ಜಗದ್ಗುರುಗಳ ಹಾರೈಕೆ

rambhapuri
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಶ್ರೀಪೀಠದ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
Published on

ಬಾಳೆಹೊನ್ನೂರು: ಆಂಧ್ರಪ್ರದೇಶದ ಶ್ರೀಹರಿಕೋಟಾದ ಭಾರತೀಯ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿರುವ ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಆ.23ರಂದು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶಿಸಿದರು.

ರಂಭಾಪುರಿ ಪೀಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ಭಾರತ ಪ್ರಗತಿ ಹೆಜ್ಜೆ ಇಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಚ್ಚಿನ ಆಸಕ್ತಿ, ಪ್ರೋತ್ಸಾಹದಿಂದ ವಿಜ್ಞಾನ ಲೋಕದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಚಂದ್ರಯಾನ-3 ಉಡಾವಣೆ ಮಾಡಿರುವುನ್ನು ಹೊರ ರಾಷ್ಟ್ರಗಳು ಕುತೂಹಲದಿಂದ ನೋಡುತ್ತಿವೆ. ವಿಜ್ಞಾನಿಗಳು ಹೇಳಿರುವಂತೆ ಚಂದ್ರಯಾನ ನೌಕೆಯಿಂದ ಅಲ್ಲಿಂದ ಉತ್ತಮ ಸಂದೇಶಗಳು ಬರುತ್ತಿವೆ. ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜ್ಞಾನಿಗಳ ಗುರಿ ಈಡೇರಿದರೆ ಭಾರತದ ಯಶಸ್ಸಿನ ಜಗತ್ತಿನ ಪ್ರಶಂಸೆಗೆ ಪಾತ್ರವಾಗಲಿದೆ. ದೇಶದ ಘನತೆ, ಗೌರವ ಮತ್ತಷ್ಟು ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತಕ್ಕೆ ಹೆಮ್ಮೆ ತರುವ ವಿಷಯವೂ ಇದಾಗಿದೆ. ಜಗದ್ಗುರು ರೇಣುಕಾಚಾರ್ಯರು ಸಹ ಈ ಹಿಂದೆಯೇ ಜಗತ್ತಿನಲ್ಲಿ ಭಾರತದ ಶಕ್ತಿ ಅವ್ಯಕ್ತವಾಗಿದೆ ಎಂದು ಹೇಳಿದ್ದರು. ಅದು ನಿಜವಾಗಿಯೂ ಈಗ ನಡೆಯುತ್ತಿದೆ. ಚಂದ್ರಯಾನ-3ರ ಪ್ರಯೋಗದಿಂದ ವಿಜ್ಞಾನ ಲೋಕಕ್ಕೆ ಅಚ್ಚರಿಯಾದ ಬೆಳವಣಿಗೆ ನಡೆಯಲಿದೆ. ಅದರ ಪ್ರಯೋಜನ ವಿಶ್ವಕ್ಕೆ ಲಭಿಸಲಿದೆ ಎಂದರು.
ಇಸ್ರೋ ವಿಜ್ಞಾನಿಗಳು ಹಾಗೂ ಅವರ ತಂಡದ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅವರ ಸಾಧನೆ, ನಿರಂತರ ಪ್ರಯತ್ನದಿಂದಾಗಿ ಯಶಸ್ಸು ದೇಶಕ್ಕೆ ಲಭಿಸುತ್ತಿದೆ. ಚಂದ್ರಯಾನಕ್ಕಾಗಿ ಶ್ರಮಿಸಿದ ವಿಜ್ಞಾನಿಗಳ ಶ್ರಮವನ್ನು ದೇಶ ಎಷ್ಟು ಶ್ಲಾಘಿಸಿದರೂ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಅದರ ಸಾಧನೆ ಮೇರುಮಟ್ಟದ್ದಾಗಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ವಿಜ್ಞಾನಿಗಳು ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಎಲ್ಲ ಸಂಶೋಧನೆಗಳಿಗೆ ರಂಭಾಪುರಿ ಪೀಠದ ಜಗದ್ಗುರುಗಳ ಹಾಗೂ ಶ್ರೀಪೀಠದ ಎಲ್ಲ ದೇವರ ಆಶೀರ್ವಾದ ಸದಾ ಇರುತ್ತದೆ. ಈಗಾಗಲೇ ಪೀಠದ ದೇವಾಲಯದಲ್ಲಿ ಚಂದ್ರಯಾನದ ಸಾಫ್ಟ್ ಲ್ಯಾಂಡಿಂಗ್‌ಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಹ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net