ಎಲ್ಲರನ್ನೂ ಒಗ್ಗೂಡಿಸುವುದೇ ನಿಜವಾದ ಧರ್ಮ; ಹರಿಹರಪುರ ಶ್ರೀಗಳ ಅಭಿಮತ

New Project
Published on

ಹರಿಹರಪುರ: ಎಲ್ಲರನ್ನೂ ಒಗ್ಗೂಡಿಸಿಕೊಂಡು ವೈವಿಧ್ಯತೆಯಲ್ಲಿ ಏಕತೆಯನ್ನು ತಂದು ಸುಂದರ ಸಮಾಜವನ್ನು ನಿರ್ಮಾಣ ಮಾಡುವುದೇ ನಿಜವಾದ ಧರ್ಮ ಎಂದು ಹರಿಹರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. ಹರಿಹರಪುರ ಮಠದಲ್ಲಿ ಹಮ್ಮಿಕೊಂಡಿರುವ ಬ್ರಹೋತ್ಸವದ ಮೂರನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮತ ಎಂದರೆ ತಮ್ಮ ಪಂಗಡವನ್ನು ಹೊರತುಪಡಿಸಿ ಬೇರೆ ಯಾವ ಮತಗಳು ಅಸ್ತಿತ್ವದಲ್ಲಿ ಇಲ್ಲವೆಂದು ಹೇಳುವುದು. ಎಲ್ಲರೂ ಧರ್ಮ ಮತ್ತು ಮತದ ಬಗ್ಗೆ ಇರುವ ವ್ಯತ್ಯಾಸವನ್ನು ಮನನ ಮಾಡಿಕೊಂಡು ಶುದ್ಧವಾದ ಜೀವನವನ್ನು ನಡೆಸಿ ಧರ್ಮದ ಹಾದಿಯಲ್ಲಿ ನಡೆಯಬೇಕು. ಎಲ್ಲರನ್ನೂ ಸಮಾನವಾಗಿ ಪ್ರೀತಿ ವಾತ್ಸಲ್ಯದಿಂದ ಕಂಡು, ಸಹಯೋಗದೊಂದಿಗೆ ಜೀವನ ನಡೆಸಬೇಕು. ಜಾತಿ ಭೇದವನ್ನು ಅಳಿಸಿ ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಾ, ಪರಸ್ಪರ ಪ್ರೀತಿ- ವಾತ್ಸಲ್ಯ- ಸ್ನೇಹ ಸೌಹಾರ್ದದಿಂದ ಬಾಳುವಂತಹ ಸದೃಢ ಸನಾತನ ಹಿಂದೂ ಸಮಾಜವನ್ನು ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದು ಶ್ರೀಗಳು ತಿಳಿಸಿದರು. ಘೋಷಿಸಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖೆಯ ಶ್ರೀಗುಣಾನಾಥ ಸ್ವಾಮಿಗಳು ಹಾಗೂ ಅದೋನಿಯ ಶ್ರೀ ಶಾರದಾ ದತ್ತಪೀಠದ ಶ್ರೀ ವಿದ್ಯಾಭಿನವಾ ಸುಬ್ರಹ್ಮಣ್ಯ ಭಾರತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಆಡಳಿತಾಧಿಕಾರಿಗಳಾದ ಡಾ. ಬಿ.ಎಸ್. ರವಿಶಂಕರ, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ವೇದ ವಿಜ್ಞಾನ ಶೋಧನಾ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ರಾಮಚಂದ್ರ ಭಟ್, ಶ್ರೀನಿವಾಸರಾವ್ ವೆಂಕಟೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾನ್ ರಮಾಕಾಂತ್ ಶ್ರೀಕಂಠನ್‌ರವರಿಗೆ ‘ಸಾಧಕ ಶ್ರೀ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಂಕರರ ಸಂಕಲ್ಪ ಸಾಕಾರ: ಹರಿಹರಪುರ ಶ್ರೀಗಳು ಮಹಾತ್ಮರು, ಇಂಥವರಿಂದ ಸಮಾಜದ ಉದ್ಧಾರವಾಗುತ್ತದೆ. ಆದಿ ಶಂಕರಾಚಾರ್ಯರ ಮಾರ್ಗದರ್ಶನದಂತೆ ಶ್ರೀಗಳು ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ತಮಗೆ ಯಾವುದೇ ವ್ಯಾಮೋಹವು ಇಲ್ಲದಂತೆ ವಿರಕ್ತರಾಗಿ ಮೋಕ್ಷದ ಸಾಧನೆಯನ್ನು ಮಾಡುತ್ತಿದ್ದಾರೆ. ಇದರಿಂದ ಶಂಕರಾಚಾರ್ಯರ ಸಂಕಲ್ಪದಂತೆ ಈ ಸಮಾಜವು ಬೇದ ಭಾವವಿಲ್ಲದೆ ಒಗ್ಗಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖೆಯ ಶ್ರೀಗುಣಾನಾಥ ಸ್ವಾಮಿಗಳು ಹಾಗೂ ಅದೋನಿಯ ಶ್ರೀ ಶಾರದಾ ದತ್ತಪೀಠದ ಶ್ರೀ ವಿದ್ಯಾಭಿನವಾ ಸುಬ್ರಹ್ಮಣ್ಯ ಭಾರತಿ ಸ್ವಾಮಿಗಳು ಅಭಿಪ್ರಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net